ಮಂಗಳೂರು: ಈಗಾಗಲೇ ಬೈಪಾಸ್ ಸೇರಿದಂತೆ ನಾಲ್ಕು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯೊಬ್ಬರಿಗೆ ಇಲ್ಲಿನ ಇಂಡಿಯಾನಾ ಆಸ್ಪತ್ರೆ ಮತ್ತೊಮ್ಮೆ ಯಶಸ್ವಿಯಾಗಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದೆ.
ಕೇರಳದ ತ್ರಿಶ್ಶೂರಿನ 55 ವರ್ಷದ ಉಮರ್ ಎಂಬುವರಿಗೆ ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ಅಪರೂಪದ ಬೀಟಿಂಗ್ ಹಾರ್ಟ್ ಸರ್ಜರಿ (ಹೃದಯದ ಬಡಿತವನ್ನು ನಿಲ್ಲಿಸದೆ) ವಿಧಾನದ ಮೂಲಕ ಹೃದ್ರೋಗ ತಜ್ಞ ಡಾ. ಎಂ.ಕೆ. ಮೂಸಾ ಕುಂಞಿ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದುಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೃದಯ ಶಸ್ತ್ರಚಿಕಿತ್ಸೆ ಮತ್ತು ಹೃದಯ ಕಸಿ ಕೇಂದ್ರವಾದ ಇಂಡಿಯಾನಾ ಆಸ್ಪತ್ರೆಯಲ್ಲಿ ನಡೆಸಲಾದ ಈ ಅಪರೂಪದ ಶಸ್ತ್ರಚಿಕಿತ್ಸೆ ಮಂಗಳೂರು ಮತ್ತು ದಕ್ಷಿಣ ಭಾರತದಲ್ಲಿಯೇ ಮೊದಲನೇಯದ್ದಾಗಿದೆ ಎಂದರು.
ರೋಗಿಯು 15 ವರ್ಷಗಳ ಹಿಂದೆ ಎದೆನೋವನ್ನು ಅನುಭವಿಸಿದ್ದು, ಹೃದಯದಲ್ಲಿ ಅನೇಕ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಏಳು ವರ್ಷಗಳ ಹಿಂದೆ ಮತ್ತೆ ಹೊಸ ಬ್ಲಾಕ್‌ಗಳು ಅವರ ಹೃದಯದಲ್ಲಿ ಉಂಟಾ ಗಿದ್ದು, ಆ ಸಂದರ್ಭ ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇಚರಿಸಿಕೊಂಡಿದ್ದರು. ನಂತರ ಅವರ ಎದೆಯ ಮೂಳೆ ಗುಣಪಡಿಸುವಿಕೆ ಸಂಬಂಧಿಸಿದಂತೆ ಮತ್ತೆರಡು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿ ಆರೋಗ್ಯವಾಗಿ ದ್ದರು ಎಂದು ಮಾಹಿತಿ ನೀಡಿದರು.
ಎರಡು ತಿಂಗಳ ಹಿಂದೆ ಮತ್ತೆ ತೀವ್ರವಾದ ಎದೆ ನೋವು ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ವೈದ್ಯಕೀಯ ತಪಾಸಣೆಯ ವೇಳೆ ತೀವ್ರವಾದ ಬ್ಲಾಕ್‌ಗಳ ಬೆಳವಣಿಗೆ ಕಂಡು ಬಂದಿತ್ತು. ಇದು ಅವರ ಹೃದಯ ಸ್ನಾಯುಗಳಿಗೆ ಕಡಿಮೆ ರಕ್ತ ಹರಿಯುವಂತೆ ಮಾಡಿತ್ತು. ಹೀಗಾಗಿ ಅವರಿಗೆ ಕ್ಲಿಷ್ಟಕರ ಮರು ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು ಎಂದು ತಿಳಿಸಿದರು.
ಆರು ಗಂಟೆಗಳ ಶಸ್ತ್ರಚಿಕಿತ್ಸೆಯ ಮೂಲಕ ಅವರ ಬ್ಲಾಕ್‌ಗಳನ್ನು ತೆಗೆಯ ಲಾಯಿತು. ರೋಗಿಯ ಕಾಲುಗಳಿಂದ ತೆಗೆದ ರಕ್ತನಾಳಗಳನ್ನು ಬ್ಲಾಕ್‌ಗಳ ಬೈಪಾಸ್ ಮಾಡಲು ಬಳಸಲಾಯಿತು. ಈಗ ರೋಗಿಯ ಹೃದಯವು ಆರಾಮವಾಗಿ ಕೆಲಸ ಮಾಡಲು ಸಾಕಷ್ಟು ರಕ್ತವನ್ನು ಪಡೆಯುತ್ತಿದೆ ಎಂದರು.
ಬೀಟಿಂಗ್ ಹಾರ್ಟ್ ಬೈಪಾಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಸ್ನಾಯುವನ್ನು ಕತ್ತರಿಸಲು ಅತ್ಯಂತ ಪರಿಣತಿ ಹಾಗೂ ಶಸ್ತ್ರಚಿಕಿತ್ಸಾ ಕೌಶಲಗಳು ಅಗತ್ಯವಾಗಿವೆ. ಆದರೆ ಬೀಟಿಂಗ್ ಹಾರ್ಟ್ ಶಸ್ತ್ರಚಿಕಿತ್ಸೆಯಲ್ಲಿ ವ್ಯಾಪಕ ಅನುಭವ ಹೊಂದಿರುವ ಡಾ. ಮೂಸಾ ಕುಂಞಿ ಅವರು 3 ಸೆಂ.ಮೀ. ಉದ್ದದ ಮಾಂಸ ಖಂಡವನ್ನು ಕತ್ತರಿಸಿ, ಅಪಧಮನಿಯ ಮೇಲಿನ ಒತ್ತಡವನ್ನು ನಿವಾರಿಸಲು ನಿರ್ಧರಿಸಿದರು. ಪ್ರಸಕ್ತ ರೋಗಿಯು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಲು ಸಿದ್ಧರಾಗಿದ್ದಾರೆ ಎಂದು ಡಾ.ಯೂಸುಫ್ ಕುಂಬ್ಳೆ ತಿಳಿಸಿದರು.
ವೈದ್ಯರಾದ ಡಾ. ಮೂಸ ಕುಂಞಿ, ಡಾ. ಸಿದ್ಧಾರ್ಥ್, ಡಾ. ಸಚಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.