ಪುತ್ತೂರು: ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸಮರೋಪಾದಿಯಲ್ಲಿ ನಡೆಸಬೇಕು. ಮುಂದಿನ ಬೇಸಿಗೆಯ ವೇಳೆ ಯೋಜಿತ ಎಲ್ಲಾ ಪ್ರದೇಶಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಈಗ ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಅಲ್ಲಿ ನೀರು ಬಿಡುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಶಾಸಕ ಅಶೋಕ್‌ಕುಮಾರ್ ರೈ ಯೋಜನೆಯ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನಗರದ ಶಾಸಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿ ಪರಿಶೀಲನೆ ಸಂಬಂಧ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ಜತೆ ಮಂಗಳವಾರ ಸಭೆ ನಡೆಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಸರ್ಕಾರದಿಂದ ₹1,010 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಪೈಪ್‌ಲೈನ್ ಕಾಮಗಾರಿ ವೇಳೆ ರಸ್ತೆ ಬದಿಯಲ್ಲಿ ಗುಂಡಿ ತೆಗೆದಿರುವುದು ಮಳೆಗೆ ಮಣ್ಣು ಕೊಚ್ಚಿ ಹೋಗಿ ಕೆಲವು ಕಡೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿವೆ. ಮಳೆ ನೀರಿಗೆ ಮಣ್ಣು ಕೊಚ್ಚಿ ಹೋಗಿ ಹೊಂಡಗಳಾಗಿದ್ದರೆ ಅಲ್ಲಿಗೆ ಮಣ್ಣು ಹಾಕಿ ಸರಿಪಡಿಸುವ ಕೆಲಸ ಮಾಡಬೇಕು. ರಸ್ತೆ ಬದಿಯಲ್ಲಿ ತೆಗೆದ ಗುಂಡಿಗಳು ಅನಾಹುತಕ್ಕೆ ಕಾರಣವಾಗಬಾರದು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸೂಚಿಸಿದರು.
ವಿಟ್ಲ ಪಟ್ಟಣಕ್ಕೂ ನೀರು:
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 49 ಟ್ಯಾಂಕ್‌ಗಳಿವೆ. ಅದೇ ಟ್ಯಾಂಕ್‌ಗಳಿಗೆ ನೀರು ತುಂಬಿದಲ್ಲಿ ವಿಟ್ಲಕ್ಕೆ ದಿನದ 24 ಗಂಟೆ ಕಾಲವೂ ನೀರು ಪೂರೈಕೆ ಮಾಡಲು ಸಾಧ್ಯವೇ ಎಂಬುವುದರ ಬಗ್ಗೆ ಪರಿಶೀಲಿಸಬೇಕು. ಹೆಚ್ಚುವರಿ ಟ್ಯಾಂಕ್ ಬೇಕಾದಲ್ಲಿ ಅದನ್ನು ನಿರ್ಮಾಣ ಮಾಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮುಖ್ಯ ಎಂಜಿನಿಯರ್ ರಘುನಾಥ್, ಸಹಾಯಕ ಎಂಜಿನಿಯರ್ ಸುರೇಶ್, ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ ಕುಲಕರ್ಣಿ, ಯೋಜನೆಯ ಅಡ್ಮಿನ್ ಅಶ್ವಿನ್, ಕುಶಕುಮಾರ್, ನಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.