ADVERTISEMENT

ಮಂಗಳೂರು | ರಾಮ-ಲಕ್ಷ್ಮಣ ಶೋಭಾಯಾತ್ರೆಗೆ ಸಾಂಸ್ಕೃತಿಕ ರಂಗು

ರಾಮನವಮಿ ಅಂಗವಾಗಿ ಇಸ್ಕಾನ್ ಆಯೋಜಿಸಿದ್ದ ಕಾರ್ಯಕ್ರಮ; ಗಮನ ಸೆಳೆದ ಪುಟಾಣಿ ವೇಷಧಾರಿಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 6:14 IST
Last Updated 7 ಏಪ್ರಿಲ್ 2025, 6:14 IST
ಇಸ್ಕಾನ್ ಶೋಭಾಯಾತ್ರೆಯಲ್ಲಿ ರಥವನ್ನು ಭಕ್ತರು ಎಳೆದರು
ಇಸ್ಕಾನ್ ಶೋಭಾಯಾತ್ರೆಯಲ್ಲಿ ರಥವನ್ನು ಭಕ್ತರು ಎಳೆದರು   

ಮಂಗಳೂರು: ಚೆಂಡೆಯ ಹಿಮ್ಮೇಳದಲ್ಲಿ ಹರೇ ರಾಮ ಹರೇ ಕೃಷ್ಣ ಮಂತ್ರ ಮೊಳಗಿತು. ವಾದ್ಯಗಳನ್ನು ನುಡಿಸುತ್ತ ಸಾಗಿದ ಕಾರ್ಯಕರ್ತರ ಹಿಂದೆ ಎಳೆದುಕೊಂಡು ಬಂದ ಸಾಲಂಕೃತದ ರಥದ ಶೋಭಾಯಾತ್ರೆ ನಗರ ಮಧ್ಯದಲ್ಲಿ ಭಾನುವಾರ ಸಂಜೆ ಭಕ್ತಿಯ ಸಂಚಲನ ಉಂಟುಮಾಡಿತು, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹೃದಯರನ್ನು ಪುಳಕಗೊಳಿಸಿದವು.

ರಾಮನವಮಿ ಅಂಗವಾಗಿ ಕೊಡಿಯಾಲ್‌ಬೈಲ್‌ನ ಇಸ್ಕಾನ್ ಆಯೋಜಿಸಿದ್ದ ಶ್ರೀರಾಮ–ಲಕ್ಷ್ಮಣರು ಕಂಗೊಳಿಸಿದ ರಥದಲ್ಲಿ ಸೀತಾಮಾತೆ, ಹನುಮಂತನ ವಿಗ್ರಹಗಳನ್ನು ಕೂಡ ಇರಿಸಲಾಗಿತ್ತು. ರಥದ ಮುಂದೆ ಹೆಜ್ಜೆ ಹಾಡುತ್ತ, ಕುಣಿಯುತ್ತ ಹೆಜ್ಜೆ ಹಾಕುತ್ತಿದ್ದವರ ನಡುವೆ ಪುಟಾಣಿಗಳಾದ ಕುಂಜ್ ರಾಜಪುರೋಹಿತ್, ಶಾರ್ವರಿ, ರಿಶಾಂತ್ ಸಾಯಿ ಮತ್ತು ಶ್ರೀಹರಿ ಕಿಣಿ ಪುರಾಣದ ಪಾತ್ರಗಳ ವೇಷ ತೊಟ್ಟು ಸಾಗಿದರು. ಇಸ್ಕಾನ್‌ ಯೋಜನೆಗಳನ್ನು ಬಿಂಬಿಸುವ ವಾಹನಗಳು  ರಥದ ಹಿಂದೆ ಬಂದವು. ಪಾನೀಯ ಮತ್ತು ಪ್ರಸಾದ ವಿತರಿಸಲು ಸೇಂಟ್‌ ಅಲೋಶಿಯನ್ ಕಾಲೇಜಿನ ಎನ್‌ಎಸ್‌ಎಸ್‌ ಕೆಡೆಟ್‌ ಇದ್ದರು.

ಉತ್ಸವದ ಅಂಗವಾಗಿ ಅರ್ಚಕ ದೇವಕಿತನಯದಾಸ ಅವರು ಮುಂಜಾನೆ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳಿಗೆ ಅಲಂಕಾರ ಮತ್ತು ಶೃಂಗಾರ ಪೂಜಾವಿಧಿ ನೆರವೇರಿಸಿದರು. ಸಂಜೆ ಈ ವಿಗ್ರಹಗಳನ್ನು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಿದ ನಂತರ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಇಸ್ಕಾನ್ ಸಂಸ್ಥೆ ಮುಖ್ಯಸ್ಥ ಗುಣಕರ ರಾಮದಾಸ ಮತ್ತು ಹರಿಚರಣ್ ದಾಸ್ ಅವರು ರಥದಲ್ಲಿ ಪೂಜೆ ನೆರವೇರಿಸಿದರು. ಪಿ.ವಿ.ಎಸ್ ಕಲಾಕುಂಜದಿಂದ ಹೊರಟ ಶೋಭಾಯಾತ್ರೆ ಬೆಸೆಂಟ್ ಶಾಲೆ ಮುಂದಿನಿಂದ ಸಾಗಿ ಎಂ.ಜಿ. ರಸ್ತೆ, ಪಿವಿಎಸ್ ವೃತ್ತ, ನವಭಾರತ್ ವೃತ್ತವನ್ನು ದಾಟಿ ಶಾರದಾ ವಿದ್ಯಾಲಯದ ಪ್ರಾಂಗಣ ತಲುಪಿತು. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು. 

ADVERTISEMENT

ಉಪಾಸನಾ ಅಕಾಡೆಮಿ ತಂಡದ ಪ್ರತೀಕ್ಷಾ ಪ್ರಭು ನೇತೃತ್ವದ ತಂಡ ಪ್ರಸ್ತುತಪಡಿಸಿದ ಭಕ್ತಿಭಾವದ ನೃತ್ಯದ ನಂತರ ಕೃಷ್ಣನನ್ನು ಕೊಂಡಾಡುವ ಇತರ ನೃತ್ಯ ಕಾರ್ಯಕ್ರಮಗಳು ರಂಗೇರಿದವು. ಸಭಾ ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್, ಉದ್ಯಮಿಗಳಾದ ನಿಶಾಂತ್ ಶೇಟ್, ಅಜಯ್ ಶೆಟ್ಟಿ, ಅಭಿನವ್ ಬನ್ಸಾಲ್‌, ಹೃದ್ರೋಗ ತಜ್ಞ ಡಾ.ಮೋಹನ್ ಪೈ, ಇಸ್ಕಾನ್‌ನ ಸನಂದನ ದಾಸ, ಸುಂದರ ಗೌರದಾಸ, ನಂದನ ದಾಸ ಪಾಲ್ಗೊಂಡಿದ್ದರು. ಶ್ವೇತದ್ವೀಪ ದಾಸ ನಿರೂಪಿಸಿದರು.

ಸನಾತನದಿಂದ ಬಾಲಸಂಸ್ಕಾರ 

ರಾಮನವಮಿ ಅಂಗವಾಗಿ ಸನಾತನ ಸಂಸ್ಥೆ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡಿನ 8 ಸ್ಥಳಗಳಲ್ಲಿ ಬಾಲಸಂಸ್ಕಾರ ವರ್ಗಗಳನ್ನು ಆಯೋಜಿಸಿತ್ತು. ವರ್ಗದ ಭಾಗವಾಗಿ ಸಾಮೂಹಿಕ ‘ಶ್ರೀರಾಮ ಜಯರಾಮ ಜಯಜಯ ರಾಮ ನಾಮಜಪ ಮಾಡಲಾಯಿತು. ಬಾಲಸಂಸ್ಕಾರ ವರ್ಗದ ಮಕ್ಕಳು  ರಾಮಚಂದ್ರನ ಕಥೆಗಳನ್ನು ಕೇಳಿ, ರಾಮನ ಗುಣಗಳನ್ನು ಅರಿತುಕೊಂಡರು.

ಬೋಳೂರು ಬೊಕ್ಕಪಟ್ಟಣ ಭಜನಾ ಮಂದಿರ, ವೇಣೂರಿನ ಮಂಜುಶ್ರೀ ಭಜನಾ ಮಂಡಳಿ ಮುಂತಾದ ಬಾಲಸಂಸ್ಕಾರ ವರ್ಗಗಳಲ್ಲಿ 200ಕ್ಕೂ ಅಧಿಕ ಮಕ್ಕಳು ಮತ್ತು ಪಾಲಕರು ಪಾಲ್ಗೊಂಡಿದ್ದರು ಎಂದು ರಾಜ್ಯ ವಕ್ತಾರ ವಿನೋದ ಕಾಮತ್ ತಿಳಿಸಿದ್ದಾರೆ.

ರಾಮನವಮಿ ಅಂಗವಾಗಿ ಸನಾತನ ಸಂಸ್ಥೆ ಆಯೋಜಿಸಿದ್ದ ಬಾಲಸಂಸ್ಕಾರ ವರ್ಗದಲ್ಲಿ ಪಾಲ್ಗೊಂಡಿದ್ದ ಮಕ್ಕಳು

ಚೆಂಡೆಯ ಹಿಮ್ಮೇಳದಲ್ಲಿ ವಾದ್ಯಗಳನ್ನು ನುಡಿಸುತ್ತ ಸಾಗಿದ ಕಾರ್ಯಕರ್ತರು ರಥದಲ್ಲಿ ಪೂಜೆ ನೆರವೇರಿಸಿದ ಗುಣಕರ ರಾಮದಾಸ ಮತ್ತು ಹರಿಚರಣ್ ದಾಸ್ ಪಿ.ವಿ.ಎಸ್ ಕಲಾಕುಂಜದಿಂದ ಹೊರಟು ಶಾರದಾ ವಿದ್ಯಾಲಯದಲ್ಲಿ ಮುಕ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.