ADVERTISEMENT

ವರ್ಷದೊಳಗೆ ಜಿಲ್ಲೆಯಲ್ಲಿ ಸುಧಾರಿತ ಐಟಿಐ

ಟಾಟಾ ಟೆಕ್ನಾಲಜಿ ಸಹಭಾಗಿತ್ವದಲ್ಲಿ ಐಟಿಐಗಳ ಉನ್ನತೀಕರಣ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:29 IST
Last Updated 17 ಜೂನ್ 2021, 4:29 IST
ಟಾಟಾ ಟೆಕ್ನಾಲಜಿಸ್‌ ಸಹಭಾಗಿತ್ವದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಧುನೀಕರಣ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈಚೆಗೆ ಪ್ರಗತಿ ಪರಿಶೀಲನೆ ನಡೆಸಿದರು.
ಟಾಟಾ ಟೆಕ್ನಾಲಜಿಸ್‌ ಸಹಭಾಗಿತ್ವದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಧುನೀಕರಣ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈಚೆಗೆ ಪ್ರಗತಿ ಪರಿಶೀಲನೆ ನಡೆಸಿದರು.   

ಮಂಗಳೂರು: ರಾಜ್ಯ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಟಾಟಾ ಟೆಕ್ನಾಲಜಿಸ್ ಲಿಮಿಟೆಡ್ (ಟಿಟಿಎಲ್‌) ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು(ಐಟಿಐ) ಉನ್ನತೀಕರಿಸಲಾಗುತ್ತಿದ್ದು, ಈ ಪೈಕಿ ಮಂಗಳೂರಿನ 2, ಪುತ್ತೂರು, ವಿಟ್ಲ, ಬೆಳ್ತಂಗಡಿಯ ತಲಾ ಒಂದು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 5 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಇದರಲ್ಲಿ ಸೇರಿವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ನಗರದ ಕದ್ರಿಹಿಲ್ಸ್‌ ಕೈಗಾರಿಕಾ ತರಬೇತಿ ಸಂಸ್ಥೆಯ ಟೆಕ್ನಾಲಜಿ ಲ್ಯಾಬ್‍ನ ವಿನ್ಯಾಸ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲನೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ವರ್ಕ್‍ಶಾಪ್ ಕಟ್ಟಡದ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲನೆ ನಡೆಸಿದ ನಂತರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಜತೆ ಒಪ್ಪಂದದಂತೆ ಟಾಟಾ ಕಂಪನಿ ಪ್ರತಿ ಐಟಿಐಯನ್ನು ಸುಮಾರು ₹30 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಿದೆ. ಎಲೆಕ್ಟ್ರಾನಿಕ್ ವೆಹಿಕಲ್ ತಂತ್ರಾಜ್ಞಾನಕ್ಕೆ ಸಂಬಂಧಿಸಿದ ಆಧುನಿಕ ಉಪಕರಣಗಳು, ಕಂಪ್ಯೂಟರೈಸ್ಡ್ ನ್ಯೂಮರಿಕಲ್ ಮಿಲ್ಲಿಂಗ್ ಮತ್ತು ಟರ್ನಿಂಗ್ ಮೆಷಿನ್, ರೊಬೋಟಿಕ್ ಕಂಟ್ರೋಲ್ಡ್ ವೆಲ್ಡಿಂಗ್ ಮೆಷಿನ್, ಟೂಲ್‍ಕ್ರಿಬ್ ಇತ್ಯಾದಿಗಳನ್ನು ಅಳವಡಿಸಿ ಸುಸಜ್ಜಿತ ಕಾರ್ಯಾಗಾರವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಎಲ್ಲ ಐದು ಐಟಿಐಗಳಲ್ಲಿ ಟೆಕ್ನಾಲಜಿ ಲ್ಯಾಬ್‌ ಅನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಡಿಸೈನ್, ಡೆವಲಪ್‍ಮೆಂಟ್, ಇಂಟರ್‌ನೆಟ್ ಆಫ್ ಥಿಂಗ್ಸ್, ವರ್ಚುವಲ್ ಸ್ಯಾಟಲೈಟ್, ಪ್ರೊಡಕ್ಟ್ ವೆರಿಫಿಕೇಶನ್ ಇತ್ಯಾದಿ ಆಧುನಿಕ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು, ಜಿಲ್ಲೆಯ ಇತರ ಕೈಗಾರಿಕಾ ತರಬೇತಿ ಸಂಸ್ಥೆಗಳು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕೌಶಲ ವರ್ಧನೆಯ ಉದ್ದೇಶವನ್ನೂ ಇಲಾಖೆ ಹೊಂದಿದೆ ಎಂದು ಹೇಳಿದರು.

ಮೂರು ತಾಲ್ಲೂಕುಗಳಲ್ಲಿ ನಿರ್ಮಿಸಲಾಗುತ್ತಿರುವ ವರ್ಕ್‍ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್‍ಗಳ ವಿವರವನ್ನು ಜಿಲ್ಲಾ ನೋಡಲ್ ಐಟಿಐ ಪ್ರಾಚಾರ್ಯ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗಿರಿಧರ್ ಸಾಲಿಯಾನ್ ಪ್ರಾತ್ಯಕ್ಷಿಕೆ ಮೂಲಕ ಕಾಮಗಾರಿ ಪ್ರಗತಿ ವಿವರ ನೀಡಿದರು. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹಾಗೂ ಮಹಿಳಾ ಐಟಿಐ ಪ್ರಾಚಾರ್ಯ ಎ.ಬಾಲಕೃಷ್ಣ ಪ್ರಗತಿ ಮಾಹಿತಿ ನೀಡಿದರು. ಮಂಗಳೂರು ಮಹಾನಗರ ಪಾಲಿಕೆ, ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.