ADVERTISEMENT

ಅವಳಿ ಜಿಲ್ಲೆ ಜೈನರ ಮೌನ ಪ್ರತಿಭಟನೆ

ಪ್ರವಾಸಿ ತಾಣವಾಗಿ ಪವಿತ್ರ ಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿ: ಜಾರ್ಖಂಡ್ ಸರ್ಕಾರದ ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:58 IST
Last Updated 29 ಡಿಸೆಂಬರ್ 2022, 4:58 IST
ಜೈನರು ಮೂಡುಬಿದಿರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಜೈನರು ಮೂಡುಬಿದಿರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಮೂಡುಬಿದಿರೆ: ಜೈನ ಧರ್ಮೀಯರ ಪವಿತ್ರ ಕ್ಷೇತ್ರಜಾರ್ಖಂಡ್‌ನ ಮಧುಬನ ಮತ್ತು ಪಾರ್ಶ್ವನಾಥ ಪ್ರದೇಶದ ಶ್ರೀ ಸಮ್ಮೇದ ಶಿಖರ್ಜಿ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಹೊರಡಿಸಿದ ಆದೇಶದ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಸಮಾಜದವರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ‘ಸಮ್ಮೇದ ಶಿಖರ್ಜಿ ಜೈನರ ಪವಿತ್ರ ಕ್ಷೇತ್ರವಾಗಿದ್ದು ತೀರ್ಥಂಕರರು ತಪಸ್ಸು ಮಾಡಿ ಸಿದ್ಧಿ ಪ್ರಾಪ್ತಿ ಹೊಂದಿದ ಪುಣ್ಯ ಭೂಮಿ. ನಿತ್ಯ ಸಾವಿರಾರು ಜೈನರು ಶ್ರದ್ಧಾ ಭಕ್ತಿಯಿಂದ ಕ್ಷೇತ್ರದ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಇಂತಹ ಪವಿತ್ರ ಕ್ಷೇತ್ರವನ್ನು ಜಾರ್ಖಂಡ್‌ ಸರ್ಕಾರ ಪ್ರವಾಸಿ ತಾಣವಾಗಿಸಲು ತೀರ್ಮಾನಿಸಿರುವುದರಿಂದ ಅಲ್ಪಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದರು.

ಸ್ವಾಮೀಜಿ ನೇತೃತ್ವದಲ್ಲಿ ಸಾವಿರ ಕಂಬ ಬಸದಿ ಆವರಣದಿಂದ ಮುಖ್ಯ ರಸ್ತೆಯ ಮೂಲಕ ಆಡಳಿತ ಸೌಧದವರೆಗೆ ಸಾವಿರಾರು ಜೈನರು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ADVERTISEMENT

ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ, ಚೌಟರ ಅರಮನೆಯ ಕುಲದೀಪ್ ಎಂ, ಮಾಜಿ ಸಚಿವ ಅಭಯಚಂದ್ರ ಜೈನ್, ಜೈನ್ ಮಿಲನ್ ವಲಯ ಅಧ್ಯಕ್ಷ ಪುಷ್ಪರಾಜ್ ಜೈನ್, ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ್‌, ಜೈನ ಸಮಾಜದ ಪ್ರಮುಖರಾದ ಕೆ.ಪಿ ಜಗದೀಶ್ ಅಧಿಕಾರಿ, ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಅಭಿಜಿತ್ ಎಂ, ಡಾ.ಮಹಾವೀರ ಜೈನ್, ನಮಿರಾಜ್, ಧನಕೀರ್ತಿ ಬಲಿಪ, ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಯತಿರಾಜ್ ಜೈನ್ ಮತ್ತಿತರರು ಇದ್ದರು.

ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಮುನಿರಾಜ ರೆಂಜಾಳ ನಿರೂಪಿಸಿದರು. ಶೈಲೇಂದ್ರ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದ್ಮಪ್ರಸಾದ್ ಜೈನ್ ಮನವಿ ಪತ್ರ ವಾಚಿಸಿದರು. ಪ್ರವೀಣ್‌ಚಂದ್ರ ಜೈನ್ ವಂದಿಸಿದರು. ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.