ADVERTISEMENT

ಮಂಗಳೂರು |ಕಡಬ ಸಂಸ್ಮರಣಾ ಪ್ರಶಸ್ತಿಗೆ ಭಾಗವತ ದಿನೇಶ ಅಮ್ಮಣ್ಣಾಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:37 IST
Last Updated 21 ಆಗಸ್ಟ್ 2025, 7:37 IST
ದಿನೇಶ್‌ ಅಮ್ಮಣ್ಣಾಯ
ದಿನೇಶ್‌ ಅಮ್ಮಣ್ಣಾಯ   

ಮಂಗಳೂರು: ಕಡಬ ಸಂಸ್ಮರಣಾ ಸಮಿತಿ ವತಿಯಿಂದ ಯಕ್ಷಗಾನ ಕಲಾವಿದರಿಗೆ ನೀಡುವ, ‘ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ 2025’ಕ್ಕೆ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ, ‘ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳದ ಹೆಸರಾಂತ ಚಂಡೆ ಮದ್ದಳೆ ವಾದಕ ಕಡಬ ನಾರಾಯಣ ಆಚಾರ್ಯ ಮತ್ತು  ಮದ್ದಳೆ ವಾದಕರಾಗಿ ಯಕ್ಷರಂಗದಲ್ಲಿ ಛಾಪು ಮೂಡಿಸಿ ಸಣ್ಣ ಪ್ರಾಯದಲ್ಲೇ ಇಹಲೋಕ ತ್ಯಜಿಸಿರುವ ಅವರ ಪುತ್ರ ಕಡಬ ವಿನಯ ಆಚಾರ್ಯ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಈ ವರ್ಷದ ಪ್ರಶಸ್ತಿ ಸಲ್ಲಲಿದೆ’ ಎಂದರು.

‘ಕಾಸರಗೋಡು ಜಿಲ್ಲೆಯ ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಇದೇ 31ರಂದು ಮಧ್ಯಾಹ್ನ 2ರಿಂದ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್‌ ಭಟ್‌ ಭಾಗವಹಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ‘ಸುರಭಿಜಾತೆ’ ಪ್ರಸಂಗದ ತಾಳಮದ್ದಲೆ ನಡೆಯಲಿದ್ದು, ಅಮ್ಮಣ್ಣಾಯ ಅವರೇ ಭಾಗವತಿಕೆ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದರು ‘ಶ್ರೀರಾಮ ದರ್ಶನ’ ಯಕ್ಷಗಾನವನ್ನು ಪ್ರರ್ಶಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಆಚಾರ್ಯ ಜಿ.ಟಿ.ಆಚಾರ್ಯ ಮುಂಬೈ, ಕಾರ್ಯದರ್ಶಿ ಗಿರೀಶ್ ಕಾವೂರು, ಖಜಾಂಜಿ ಅಂಡಿಂಜೆ ಭಾಸ್ಕರ ಆಚಾರ್ಯ, ಲೋಕೇಶ ಆಚಾರ್ಯ ಹಾಗೂ ರಾಮ ಗೋಪಾಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.