ADVERTISEMENT

‘ಮಂಜೇಶ್ವರ-ಕನ್ನಡ ಭಾಷಾ ಪ್ರದೇಶ ಸ್ಥಾನಮಾನ ಸ್ವಾಗತಾರ್ಹ’

​ಪ್ರಜಾವಾಣಿ ವಾರ್ತೆ
Published 15 ಮೇ 2020, 15:55 IST
Last Updated 15 ಮೇ 2020, 15:55 IST
ಪ್ರದೀಪ್‌ಕುಮಾರ್ ಕಲ್ಕೂರ
ಪ್ರದೀಪ್‌ಕುಮಾರ್ ಕಲ್ಕೂರ   

ಮಂಗಳೂರು: ಕೇರಳ ರಾಜ್ಯ ಸರ್ಕಾರವು ಮಂಜೇಶ್ವರ ತಾಲ್ಲೂಕನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿ ಆದೇಶ ಹೊರಡಿಸಿರುವುದು ಕನ್ನಡಿಗರೂ ಸಂಭ್ರಮ ಪಡುವ ಸ್ವಾಗತಾರ್ಹ ನಿಲುವು ಎಂದುಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಂಞಣ್ಣ ರೈ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಎಂ. ಇದಿನಬ್ಬ, ಕರ್ನಾಟಕ ಗಡಿ ರಕ್ಷಣಾ ಸಮಿತಿ ಸೇರಿದಂತೆ ಅನೇಕರ ಹೋರಾಟಕ್ಕೆ ಲಭಿಸಿರುವ ಪ್ರತಿಫಲ ಇದಾಗಿದ್ದು. ರಾಷ್ಟ್ರಕವಿ ಗೋವಿಂದ ಪೈಗಳ ತವರೂರಿನ ಜನತೆಗೆ ಹಾಗೂ ಗಡಿನಾಡಿನ ಕನ್ನಡಿಗರೆಲ್ಲರಿಗೂ ಸಂದ ಗೌರವ ಇದಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಕಾಸರಗೋಡು ಕನ್ನಡಿಗರಿಗೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗುವ ಎಲ್ಲ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಸವಲತ್ತುಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಈ ಪ್ರದೇಶದ ಕನ್ನಡಿಗರಿಗೆ ಒದಗಿಸಿತ್ತು. ಕೇರಳ ಸರ್ಕಾರ ಕಾಸರಗೋಡನ್ನು ಆಡಳಿತಾತ್ಮಕವಾಗಿ ವಿಭಜಿಸುವ ಸಂದರ್ಭ ಮಂಜೇಶ್ವರವನ್ನು ಪ್ರತ್ಯೇಕ ತಾಲ್ಲೂಕಾಗಿ ಮಾಡಲಾಗಿತ್ತು. ಆದರೆ, ಮಂಜೇಶ್ವರ ತಾಲ್ಲೂಕಿಗೆ ಕನ್ನಡ ಭಾಷಾ ಪ್ರದೇಶ ಸ್ಥಾನಮಾನದ ಸವಲತ್ತು ಲಭಿಸಿರಲಿಲ್ಲ. ಸಹಜವಾಗಿ ಅಲ್ಲಿನ ಕನ್ನಡಿಗರು ತಾಂತ್ರಿಕ ನೆಲೆಯಲ್ಲಿ ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.