ADVERTISEMENT

ಇಂದು ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 19:46 IST
Last Updated 8 ಡಿಸೆಂಬರ್ 2018, 19:46 IST

ಸುಳ್ಯ: ತಾಲ್ಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 9ರಂದು ನಡೆಯಲಿದ್ದು, ಸಾಹಿತಿ ಲಲಿತಾಜ ಮಲ್ಲಾರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವಠಾರದಲ್ಲಿ ನಡೆಯಲಿದೆ.

ಜಿಲ್ಲಾ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ, 23ನೇ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿಯ ಆಶ್ರಯದಲ್ಲಿ ಸಮ್ಮೇಳನ ಡಾ. ಕೀಲಾರು ಗೋಪಾಲಕೃಷ್ಣಯ್ಯ ವೇದಿಕೆ-ಉಳುವಾರು ಪಠೇಲ್ ಮಾಲಪ್ಪ ಗೌಡ ಸಭಾಂಗಣದಲ್ಲಿ ನಡೆಯಲಿದೆ.

ಬೆಂಗಳೂರು ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಕೆ.ವೈ.ನಾರಾಯಣ ಸ್ವಾಮಿ ಸಮ್ಮೇಳನ ಉದ್ಘಾಟಿಸುವರು. ಕನ್ನಡ ಭುವನೇಶ್ವರಿ ಮೆರವಣಿಗೆಗೆ ಜಿಲ್ಲಾ ಪಂಚಾಯತಿ ಸದಸ್ಯ ಹರೀಶ್ ಕಂಜಿಪಿಲಿ ಚಾಲನೆ , ಅರಂತೋಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ ರಾಷ್ಟ್ರ ಧ್ವಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಪರಿಷತ್ತಿನ ಧ್ವಜ ಮತ್ತು ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಕನ್ನಡ ಧ್ವಜಾರೋಹಣವನ್ನು ನೆರವೇರಿಸುವರು. ಪುಸ್ತಕ ಪ್ರದರ್ಶನವನ್ನು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸುವರು. ಸ್ಮರಣ ಸಂಚಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅನಾವರಣ ಮಾಡುವರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿರುವರು.

ADVERTISEMENT

ಕವಿಗೋಷ್ಠಿ ನ, ಕವಿ, ಕಾವ್ಯ ಗಾಯನ, ವಿಚಾರಗೋಷ್ಠಿ ನಡೆಯಲಿದೆ. ಜಿಲ್ಲಾಎಸ್‌ಪಿ ಡಾ. ರವಿಕಾಂತೇ ಗೌಡ ಸಮಾರೋಪ ಭಾಷಣ ಮಾಡುವರು. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ 10 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಸಮಾಜಸೇವೆಗೆ ಸುಶೀಲಮ್ಮ ಮರುವಳ, ಸಹಕಾರಿ ಆಡಳಿತ ಸೇವೆಗೆ ವಿಶ್ವನಾಥ ನಾಯರ್, ಪೊಲೀಸ್ ಸೇವೆಯಲ್ಲಿ ಎ.ಜಿ. ವೆಂಕಟ್ರಮಣ, ಪಂಚಾಯತಿ ಆಡಳಿತ ಸೇವೆಗೆ ಯು.ಡಿ. ಶೇಖರ್, ಉರಗ ಸ್ನೇಹಿ ಶಿವಾನಂದ ಕುಕ್ಕುಂಬಳ, ಉದ್ಯಮ ಮತ್ತು ಸಮಾಜಸೇವೆಗೆ ಯು.ಬಿ. ಚಕ್ರಪಾಣಿ, ಸ್ವ ಉದ್ಯೋಗ ಕ್ಷೇತ್ರದಲ್ಲಿ ಎಂ.ಕೆ.ರಾಮಚಂದ್ರ, ಕಲೆ, ಸಾಂಸ್ಕೃತಿಕ ಸೇವೆಗೆ ಮಂಜುನಾಥ ಬಂಗ್ಲೆಗುಡ್ಡೆ, ದುಡಿ ಮತ್ತು ಕೊಳಲು ವಾದನದ ಕ್ಷೇತ್ರದಲ್ಲಿ ಪಿ.ಜಯರಾಮ ಅವರನ್ನುಸನ್ಮಾನಿಸಲಾಗುವುದು.

ಕನ್ನಡ ಹಾಸ್ಯಮಯ ನಾಟಕ ‘ಮೂರು ಮುತ್ತು’ ಪ್ರದರ್ಶನ ನಡೆಯಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ತೊಡಿಕಾನ, ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ದೀಪಕ್ ರೈ ಪಾಣಾಜೆ ಅವರ ಸಾರಥ್ಯದಲ್ಲಿ ಮಸ್ಕಿರಿ ಕುಡ್ಲ ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.