ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಿಂದ ಎಸ್‍ಡಿಪಿಐ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 14:24 IST
Last Updated 30 ಜನವರಿ 2023, 14:24 IST
   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಸೋಷಿಯಲ್‌ ಡೆಮಾಕ್ರೆಟಿಕ್ ಪಾರ್ಟಿ ಆಫ್‌ ಇಂಡಿಯಾ (ಎಸ್‍ಡಿಪಿಐ) ಸ್ಪರ್ಧೆ ಮಾಡಲಿದೆ’ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅನ್ಸರ್‌ ಕೊಡ್ಲಿಪೇಟೆ ಹೇಳಿದರು.

ಇಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅನ್ಸರ್ ಕೊಡ್ಲಿಪೇಟೆ, ‘ಬಂಟ್ವಾಳ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಬೆಳ್ತಂಗಡಿ ಕ್ಷೇತ್ರದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಕ್ಬರ್ , ಮೂಡುಬಿದಿರೆ ಕ್ಷೇತ್ರದಿಂದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕ್‌ ಸ್ಪರ್ಧಿಸಲಿದ್ದಾರೆ’ ಎಂದರು.

‘ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಫೆಬ್ರುವರಿ ಎರಡನೇ ವಾರದಲ್ಲಿ ಪ್ರಕಟಿಸುತ್ತೇವೆ. ರಾಜ್ಯದಲ್ಲಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷವು ತೀರ್ಮಾನಿಸಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಅದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‍ ಪಕ್ಷದ 14 ಶಾಸಕರು ಹಾಗೂ ಜೆಡಿಎಸ್‌ ಮೂವರು ಶಾಸಕರು ತಲಾ ₹ 50 ಕೋಟಿಗೆ ಮುಂಬೈನಲ್ಲಿ ಬಿಕರಿಯಾಗಿದ್ದರಿಂದ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ’ ಎಂದರು
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ರಾಜ್ಯ ಸಮಿತಿ ಸಂಯೋಜಕ ನವಾಜ್‌ ಉಳ್ಳಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಸಮಿತಿಯ ಸಂಯೋಜಕ ನವಾಜ್‌ ಉಳ್ಳಾಲ, ರಾಜ್ಯ ಸಮಿತಿ ಸದಸ್ಯ ರಿಯಾಜ್‌ ಕಡಂಬು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಕ್ಭರ್ ಇದ್ದರು.

‘ಶರಣ್‌ ಪಂಪ್‌ವೆಲ್‌ ಬಂಧಿಸಿ’

‘ಪ್ರವೀಣ್‌ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಫಾಝಿಲ್‌ನನ್ನು ಕೊಲೆ ಮಾಡಿದ್ದೇವೆ ಎಂದು ಬಹಿರಂಗವಾಗಿಹಾಗೂ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‍ವೆಲ್‌ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅನ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.