ADVERTISEMENT

ಸ್ವಚ್ಛ, ಸುಂದರ ಪರಿಸರ ನಮ್ಮೆಲ್ಲರ ಹೊಣೆ

ಸಂದೇಶವುಳ್ಳ ರೈಲಿಗೆ ಚಾಲನೆ ನೀಡಿದ ಮಹಾಬಲೇಶ್ವರ ಎಂ.ಎಸ್.

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 13:07 IST
Last Updated 13 ಡಿಸೆಂಬರ್ 2019, 13:07 IST
ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಶುಕ್ರವಾರ ಫಲಕವುಳ್ಳ ಮಂಗಳೂರು–ಮುಂಬೈ ರೈಲಿಗೆ ಮಹಾಬಲೇಶ್ವರ ಎಂ.ಎಸ್‌. ಹಸಿರು ನಿಶಾನೆ ತೋರಿದರು.
ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಶುಕ್ರವಾರ ಫಲಕವುಳ್ಳ ಮಂಗಳೂರು–ಮುಂಬೈ ರೈಲಿಗೆ ಮಹಾಬಲೇಶ್ವರ ಎಂ.ಎಸ್‌. ಹಸಿರು ನಿಶಾನೆ ತೋರಿದರು.   

ಮಂಗಳೂರು: ಕರ್ಣಾಟಕ ಬ್ಯಾಂಕ್ ನಗರದಲ್ಲಿ ವಿನೂತನವಾದ ಅಭಿಯಾನಕ್ಕೆ ಚಾಲನೆ ನೀಡಿದ್ದು, ರೈಲಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಸಂದೇಶವುಳ್ಳ ಫಲಕಗಳನ್ನು ಅಳವಡಿಸಿದೆ.

ಮಂಗಳೂರಿನಿಂದ-ಮುಂಬೈಗೆ ನಿತ್ಯವು ಸಂಚರಿಸಲಿರುವ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ‘ಸ್ವಚ್ಛಭಾರತ’, ‘ಮಳೆ ನೀರು ಸಂಗ್ರಹ’, ‘ನೀರಿನ ಉಳಿತಾಯ’, ‘ಹೆಣ್ಣು ಮಗುವಿನ ಶಿಕ್ಷಣ’, ಪರಂಪರೆಯ ರಕ್ಷಣೆ’, ಇತ್ಯಾದಿ ವಿಷಯಗಳ ಕುರಿತಾದ ಸಚಿತ್ರ ಸಂದೇಶಗಳುಳ್ಳ ಫಲಕಗಳನ್ನು ಅಳವಡಿಸಲಾಗಿದ್ದು, ಈ ರೈಲು ಸಂಚರಿಸುವೆಡೆ ಜಾಗೃತಿಯನ್ನು ಮೂಡಿಸಲಿದೆ.

ಈ ಸಚಿತ್ರ ಫಲಕಗಳನ್ನು ವಿವಿಧ ಭಾಷೆಗಳಲ್ಲಿ ಸಾಮಾನ್ಯ ಜನತೆಗೆ ತಿಳಿಯುವಂತೆ ರಚಿಸಲಾಗಿದ್ದು, ಇವು ಸ್ವಚ್ಛ, ಸುಂದರ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಸಹಕಾರಿಯಾಗಲಿದೆ.

ADVERTISEMENT

ನಗರದಲ್ಲಿ ನಡೆದ ಸರಳ ಸರಳ ಸಮಾರಂಭದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ದೇಶದ ನಾಗರಿಕರು ಮೂಲಭೂತ ಹಕ್ಕುಗಳ ಬಗ್ಗೆ ಪ್ರಸ್ತಾಪಿಸುವುದು ಸ್ವಾಭಾವಿಕ. ಆದರೆ ನಾವು ಮಾಡಲೇಬೇಕಾದ ಮೂಲ ಕರ್ತವ್ಯಗಳನ್ನು ಮರೆಯಬಾರದು. ಈ ರೈಲಿನ ಮೇಲೆ ಅಳವಡಿಸಿರುವ ಸಚಿತ್ರ ಫಲಕಗಳ ಉದ್ದೇಶವೇ ಅದು ಎಂದರು.

ಈ ಸ್ಪಷ್ಟ ಸಂದೇಶಗಳು ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದರ ಮಹತ್ವ, ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ನಮ್ಮ ಹೊಣೆಗಾರಿಕೆ, ಸೌರ ಶಕ್ತಿಯ ಸದ್ಬಳಕೆ, ನೀರಿನ ಸದುಪಯೋಗ, ಮಳೆ ನೀರು ಸಂಗ್ರಹದ ಅವಶ್ಯಕತೆ ಮುಂತಾದ ಜನಪರ ಕಾಳಜಿಯ ಕೆಲಸಗಳ ಅಗತ್ಯತೆಗಳನ್ನು ಎಲ್ಲೆಡೆಯೂ ಬಿತ್ತರಿಸಲಿವೆ ಎಂದು ಹೇಳಿದರು.

‘ನಾವು ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಈ ಸಂದೇಶಗಳನ್ನು ಆಯಾ ರಾಜ್ಯದ ಭಾಷೆಗಳಲ್ಲಿ ತಲುಪಿಸುವ ಸದಾಶಯವನ್ನು ಹೊಂದಿ, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಇದೊಂದು ಜನಜಾಗೃತಿಯ ಮಹಾಯಾತ್ರೆಯಾಗಲಿ’ ಎಂಬ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬ್ಯಾಂಕಿನ ಮುಖ್ಯ ಆಡಳಿತ ಅಧಿಕಾರಿ ಗೋಕುಲದಾಸ್ ಪೈ, ಮಹಾಪ್ರಬಂಧಕ ಚಂದ್ರಶೇಖರ್ ರಾವ್ ಬಿ., ಸಹಾಯಕ ಮಹಾಪ್ರಬಂಧಕ ಶ್ರೀನಿವಾಸ್ ದೇಶಪಾಂಡೆ ಹಾಗೂ ಬುಲ್ಸ್ ಐ ಮೀಡಿಯಾ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.