ADVERTISEMENT

ಸಿಆರ್‌ಎಆರ್‌ ಬ್ಯಾಂಕ್‌ ಸುರಕ್ಷತೆಯ ಮಾನದಂಡ

ಕರ್ಣಾಟಕ ಬ್ಯಾಂಕ್ ಎಂಡಿ, ಸಿಇಒ ಮಹಾಬಲೇಶ್ವರ ಎಂ.ಎಸ್‌.

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 10:06 IST
Last Updated 12 ಮಾರ್ಚ್ 2020, 10:06 IST
ಮಹಾಬಲೇಶ್ವರ ಎಂ.ಎಸ್‌.
ಮಹಾಬಲೇಶ್ವರ ಎಂ.ಎಸ್‌.   

ಮಂಗಳೂರು: ದೇಶ ವಿದೇಶಗಳಲ್ಲಿ ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ‘ಬಂಡವಾಳ ಪರ್ಯಾಪ್ತತಾ ಅನುಪಾತ’ (ಕ್ಯಾಪಿಟಲ್‌ ಟು ರಿಸ್ಕ್‌ ವೇಟೆಡ್‌ ಅಸೆಟ್ಸ್‌ ರೆಶೋ–ಸಿಆರ್‌ಎಆರ್)ವೇ ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾಗಿದೆಯೇ ಹೊರತು, ಇತ್ತೀಚಿನ ದಿನಗಳಲ್ಲಿ ಟಿವಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅರ್ಥವಿಲ್ಲದ ‘ಎಂ- ಕ್ಯಾಪ್ ಅನುಪಾತ’ ಅಲ್ಲ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಸ್ಪಷ್ಟಪಡಿಸಿದ್ದಾರೆ.

‘ವಿದೇಶಗಳಲ್ಲಿ ‘ಬಂಡವಾಳ ಪರ್ಯಾಪ್ತತಾ ಅನುಪಾತ’ಕ್ಕೆ ಬ್ಯಾಂಕಿನ ಮುಂಗಡ, ಹೂಡಿಕೆ ಇತ್ಯಾದಿಗಳ ಸುರಕ್ಷತೆಯ ಆಧಾರದ ಮೇಲೆ ಕನಿಷ್ಠ ಶೇ 8 ರ ಮಾನದಂಡವನ್ನು ಪಾಲಿಸುತ್ತಿದ್ದರೆ, ಭಾರತದಲ್ಲಿ ಕನಿಷ್ಠ ಶೇ 9 ರ ಅನುಪಾತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಆದರೆ ಕರ್ಣಾಟಕ ಬ್ಯಾಂಕ್‌ನಲ್ಲಿ ನಾವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇ 9 ರ ಅನುಪಾತಕ್ಕೆ ಇನ್ನೂ ಶೇ 1 ಹೆಚ್ಚಾಗಿಯೇ ಸದಾಕಾಲ ಕಾಪಾಡಿಕೊಂಡು ಬಂದಿದ್ದೇವೆ. ಕಳೆದ ಮಾರ್ಚ್‌ 31ಕ್ಕೆ ಇದು ಅತ್ಯುತ್ತಮ ಅಂದರೆ ಶೇ. 13.17 ರ ಅನುಪಾತದಲ್ಲಿದ್ದು, ಈ ರೀತಿಯ ಉತ್ತಮ ಅನುಪಾತವಿರುವ ಕೆಲವೇ ಕೆಲವು ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್ ಸಹ ಒಂದು’ ಎಂದು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ಬ್ಯಾಂಕಿನ ಗವರ್ನರ್, ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಇತ್ತೀಚಿನ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಈ ಹೇಳಿಕೆಗಳು ಎಲ್ಲ ಬ್ಯಾಂಕ್ ಗ್ರಾಹಕರಿಗೆ ಸಮಯೋಚಿತ ಮಾರ್ಗಸೂಚಿ ಅಂಶಗಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘96 ವರ್ಷಗಳಿಂದ ಗ್ರಾಹಕರ ವಿಶ್ವಾಸ ಹಾಗೂ ಸಹಕಾರದಿಂದ ಪ್ರಗತಿ ಸಾಧಿಸುತ್ತಿರುವ ಕರ್ಣಾಟಕ ಬ್ಯಾಂಕ್ ಮುಂದಿನ ವರ್ಷಗಳಲ್ಲಿ ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿ ಮುಂಚೂಣಿಗೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.