
ಮಂಗಳೂರು (ದಕ್ಷಿಣ ಕನ್ನಡ): ‘ಬಜಪೆ ಠಾಣೆಯ ವ್ಯಾಪ್ತಿಯ ಕೆಂಜಾರು– ಮರವೂರು ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಿರುವ ಕುರುಹುಗಳು ಸಿಕ್ಕಿವೆ. ಇಲ್ಲಿ ಗೋಹತ್ಯೆ ಮಾಡಿದವರನ್ನು ಹಾಗೂ ಈ ಜಾಲದ ಹಿಂದೆ ಇರುವವರನ್ನು ತಕ್ಷಣವೇ ಬಂಧಿಸಬೇಕು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗೋರಕ್ಷ ವಿಭಾಗದ ಪ್ರಾಂತ ಪ್ರಚಾರ–ಪ್ರಸಾರ ಸಹಪ್ರಮುಖ್ ಪ್ರದೀಪ್ ಸರಿಪಲ್ಲ ಆಗ್ರಹಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ಗೋಹತ್ಯೆಗಳ ಹಿಂದೆ ಇರುವ ಆರೋಪಿಗಳನ್ನು ಡಿ. 15ರ (ಸೋಮವಾರ) ಒಳಗೆ ಬಂಧಿಸದಿದ್ದರೆ ವಿಎಚ್‌ಪಿ ಗೋರಕ್ಷ ವಿಭಾಗದ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.
‘ಸ್ಥಳೀಯರಿಂದ ಬಂದ ಮಾಹಿತಿ ಆಧಾರದಲ್ಲಿ ಕೆಂಜಾರು ಪ್ರದೇಶದಲ್ಲಿ ಎಂಟು– ಒಂಬತ್ತು ಪೊದೆಗಳ ಬಳಿ ಹುಡುಕಿದ್ದೇವೆ. ಅಲ್ಲೆಲ್ಲ ಗೋವುಗಳನ್ನು ಹತ್ಯೆ ಮಾಡಿದ ಕುರುಹುಗಳಿವೆ. ಕೇದಿಗೆ ಪೊದೆೊಂದರ ಬಳಿ ಗೋವಿನ ರಕ್ತ ಹೆಪ್ಪುಗಟ್ಟಿದ, ಚರ್ಮವನ್ನು ಸುಲಿದ ಕಸ ಇದೆ. ಗೋವಿನ ದವಡೆಗಳು ಸಿಕ್ಕಿವೆ. ಅಲ್ಲಿ ಕೊಳೆತ ದುರ್ವಾಸನೆ ಬರುತ್ತಿದೆ. ಇವೆಲ್ಲವನ್ನು ನೋಡಿದಾಗ, ಅಲ್ಲಿ ಗೋಹತ್ಯೆ ಸುಮಾರು ತಿಂಗಳಿನಿಂದ ನಡೆಯುತ್ತಿರುವ ಶಂಕೆ ಮೂಡಿದೆ. ಇದರ ಹಿಂದೆ ದೊಡ್ಡ ಮಟ್ಟದ ಮಾಫಿಯಾ ಇರುವಂತೆ ತೋರುತ್ತದೆ’ ಎಂದರು.
‘ಕೆಂಜಾರು–ಮರವೂರು ಪ್ರದೇಶದಲ್ಲಿ ಗೋವುಗಳು ಕಾಣೆಯಾದ ಬಗ್ಗೆ ಸ್ಥಳೀಯರೂ ಮಾಹಿತಿ ನೀಡಿದ್ದಾರೆ. ಕೆಂಜಾರಿನಲ್ಲಿ ಕಪಿಲಾ ಗೋಶಾಲೆ ಇದ್ದು, ಅಲ್ಲಿನ ಗೋವುಗಳನ್ನು ಕದ್ದು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಗೋವುಗಳನ್ನು ಕಳೆದುಕೊಂಡವರು ಬಜಪೆ ಠಾಣೆಗೆ ದೂರು ನೀಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಬಜಪೆ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನು ಕೋರಿದ್ದೇವೆ. ಗೋಹತ್ಯೆ ಮಾಡಿದವರ ಹಾಗೂ ಗೋವುಗಳ ಅಕ್ರಮ ಸಾಗಾಟದಲ್ಲಿ ತೊಡಗಿರುವವರ ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಅವರನ್ನು ಒತ್ತಾಯಿಸುತ್ತೇವೆ’ ಎಂದರು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಧಿಕೃತ ಕಸಾಯಿಕಾನೆ ಇಲ್ಲ. ಆದರೂ ಜೋಕಟ್ಟೆಯ ರೈಲು ಹಳಿ ಬಳಿ ಏಳು ದನದ ಮಾಂಸದ ಅಂಗಡಿಗಳು ಕಾರ್ಯಾಚರಿಸುತ್ತಿವೆ. ಇದು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಜಾನುವಾರು ಹತ್ಯೆ ಹಾಗೂ ಜಾನುವಾರುಗಳ ಅಕ್ರಮ ಸಾಗಣೆ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಜಾರಿನ ಕಪಿಲಾ ಗೋಶಾಲೆಯ ಎಂಟು ದನಗಳು ಗಳವಾದ ಬಗ್ಗೆ ಅದರ ಮಾಲೀಕರು ದೂರು ನೀಡಿದ್ದಾರೆ. ಮನೆಯ ಒಂದು ದನ ಕಳವಾದ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಜಾನುವಾರುಗಳನ್ನು ಹತ್ಯೆ ಮಾಡಿದ ಸ್ಥಳಕ್ಕೆ ಬಜಪೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇತ್ತೀಚೆಗೆ ಎರಡು ದನಗಳನ್ನು ಹತ್ಯೆ ಮಾಡಿದ ಹಾಗೂ ಕೆಲ ತಿಂಗಳ ಹಿಂದೆ ಐದರಿಂದ ಆರು ದನಗಳನ್ನು ಹತ್ಯೆ ಮಾಡಿದ ಕುರುಹುಗಳು ಅಲ್ಲಿ ಸಿಕ್ಕಿವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.