ADVERTISEMENT

ಮಂಗಳೂರು | 50 ಬೋಟುಗಳ ಕಡಲಯಾನ; ಮೊಳಗಿತು ಕೋಟಿ ಕಂಠ ಗಾಯನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 10:41 IST
Last Updated 28 ಅಕ್ಟೋಬರ್ 2022, 10:41 IST
   

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನದ ಅಂಗವಾಗಿ ಅರಬ್ಬಿಸಮುದ್ರದಲ್ಲಿ 50ರಷ್ಟು ಬೋಟ್‌ಗಳ ಒಂದೂವರೆ ತಾಸಿನ ಕಡಲಯಾನ ನಡೆಸಿ ಕನ್ನಡದ ಹಾಡುಗಳನ್ನು ಹಾಡಲಾಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಮೀನುಗಾರಿಕಾ ಇಲಾಖೆ, ಮೊಗವೀರ ಸಮಾಜದ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ದೋಣಿಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ 8ಕಿ.ಮೀ. ಸಾಗಿದವು.ಕನ್ನಡದ ಆರು ಹಾಡುಗಳನ್ನು ಹಾಡಲಾಯಿತು. 5 ಪರ್ಸಿನ್ ದೋಣಿಗಳು, 10 ಆಳ ಸಮುದ್ರ ಮೀನುಗಾರಿಕಾ ದೋಣಿಗಳು, 25 ನಾಡದೋಣಿಗಳು, ಕೆರೆಯಲ್ಲಿ ಮೀನುಗಾರಿಕೆ ನಡೆಸುವ 10 ದೋಣಿ ಗಳು ಹಾಗೂ 4 ಫೆರಿ ದೋಣಿ ಗಳಲ್ಲಿ ಕೋಟಿ ಕಂಠಗಾಯನ ಮೊಳಗಿತು. ಎಲ್ಲಾ ದೋಣಿಗಳಲ್ಲೂ ಕನ್ನಡದ ಬಾವುಟಗಳು ರಾರಾಜಿಸಿದವು. ಸಮುದ್ರ ನಡುವಿನ ಸೊಗಸನ್ನು ವೀಕ್ಷಿಸುತ್ತ ಜನ ಹಾಡುಗಳನ್ನು ಆಲಿಸಿದರು. ತುಳು ಬಾವುಟವೂ ರಾರಾಜಿಸಿದ್ದು ವಿಶೇಷವೆನಿಸಿತು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 'ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಮಾರ್ಗದರ್ಶನದಂತೆ ಕೋಟಿ ಕಂಠ ಗಾಯನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಇದೊಂದು ಮಹತ್ವದ ದಿನವಾಗಿ ನಾಡಿನ ಜನತೆಯ ಮನದಾಳದಲ್ಲಿ ಸದಾ ಉಳಿಯಲಿದೆ' ಎಂದರು.

ADVERTISEMENT

11 ಗಂಟೆಗೆ ದೋಣಿ ಗಳಲ್ಲಿ ಕೋಟಿ ಕಂಠ ಗಾಯನದ ಮೊದಲ ಹಾಡು ಆರಂಭವಾಯಿತು. ಆರು ಕನ್ನಡದ ಹಾಡುಗಳು ಸೊಗಸಾಗಿ ಮೂಡಿ ಬಂದವು. ಬಳಿಕ ತುಳು ಭಾಷೆಯ ಹಾಡುಗಳನ್ನು ಹಾಡಲಾಯಿತು. ಮಂಗಳೂರಿನ ಉಪ ಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರು, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಆಸಕ್ತರು ಸೇರಿದಂತೆ 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೋಟಿ ಕಂಠ ಗಾಯನಕ್ಕೂ ಮುನ್ನ ಸುಲ್ತಾನ್ ಬತ್ತೇರಿಯ ಕಡಲ ಕಿನಾರೆಯಲ್ಲಿ ಕರಾವಳಿ‌ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹಗಾನ, ದೇಶಭಕ್ತಿಗೀತೆ, ನಾಡಗೀತೆಗಳ ಗಾಯನ‌ ನೆರವೇರಿತು‌.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.