ADVERTISEMENT

ದಕ್ಷಿಣ ಕನ್ನಡ: ಅಂಬಾರಿ, ಮಲ್ಟಿ ಆ್ಯಕ್ಸೆಲ್ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:21 IST
Last Updated 28 ಜುಲೈ 2025, 7:21 IST
ವೋಲ್ವೊ ಮಲ್ಟಿ ಆ್ಯಕ್ಸೆಲ್‌ ಮತ್ತು ಅಂಬಾರಿ ಉತ್ಸವ್ ಬಸ್‌ಗಳಿಗೆ ಶಾಸಕ ಐವನ್ ಡಿಸೋಜ ಹಸಿರು ನಿಶಾನೆ ತೋರಿಸಿದರು
ವೋಲ್ವೊ ಮಲ್ಟಿ ಆ್ಯಕ್ಸೆಲ್‌ ಮತ್ತು ಅಂಬಾರಿ ಉತ್ಸವ್ ಬಸ್‌ಗಳಿಗೆ ಶಾಸಕ ಐವನ್ ಡಿಸೋಜ ಹಸಿರು ನಿಶಾನೆ ತೋರಿಸಿದರು   

ಮಂಗಳೂರು: ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗಕ್ಕೆ ಮಂಜೂರು ಮಾಡಿರುವ ಮಂಗಳೂರು–ಬೆಂಗಳೂರು ವೋಲ್ವೊ ಮಲ್ಟಿ ಆ್ಯಕ್ಸೆಲ್‌ ಸೀಟರ್‌ 2.0 ಮತ್ತು ಅಂಬಾರಿ ಉತ್ಸವ ಬಸ್‌ಗಳ ಸಂಚಾರಕ್ಕೆ ನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಪುತ್ತೂರು, ಮೈಸೂರು ಮತ್ತು ಹಾಸನ ಮಾರ್ಗಗಳ ಮೂಲಕ ಸಾಗುವ ಬಸ್‌ಗಳನ್ನು ಮಂಗಳೂರು ವಿಭಾಗದ ನಿಯಂತ್ರಕ ರಾಜೇಶ್ ಶೆಟ್ಟಿ ಬರಮಾಡಿಕೊಂಡರು. ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶಾಸಕ ಐವನ್ ಡಿಸೋಜ ಅವರು ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.

ಎರಡು ವೋಲ್ವೊ ಮಲ್ಟಿ ಆ್ಯಕ್ಸೆಲ್ ಬಸ್‌ಗಳು ಮತ್ತು ಮೂರು ಅಂಬಾರಿ ಉತ್ಸವ್ ಬಸ್‌ಗಳು ಹೊಸದಾಗಿ ಬಂದಿವೆ. ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪುವ ಎಸಿ ಸ್ಲೀಪರ್ ಬಸ್‌ ಪ್ರಯಾಣ ಕೂಡ ಆರಂಭಿಸಲಾಗಿದೆ ಎಂದು ರಾಜೇಶ್ ಶೆಟ್ಟಿ ತಿಳಿಸಿದರು. ಪುತ್ತೂರು–ಸುಳ್ಯ–ಮೈಸೂರು ಎಸಿ ಬಸ್‌ ಕೂಡ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

1982ರಲ್ಲಿ ಆರಂಭಗೊಂಡ ಮಂಗಳೂರು ವಿಭಾಗ ಪ್ರತಿದಿನ 550 ಸರ್ವಿಸ್ ನಡೆಸುತ್ತಿದ್ದು 595 ವಾಹನಗಳು ಒಟ್ಟು 2.17 ಲಕ್ಷ ಕಿಮೀ ದೂರವನ್ನು ಪ್ರತಿದಿನ ಕ್ರಮಿಸುತ್ತಿದ್ದು ನಿತ್ಯವೂ ಅಂದಾಜು 1.2 ಲಕ್ಷ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಪಾಲ್ಗೊಂಡಿದ್ದರು. 

ಬಸ್‌ಗಳ ವೇಳಾಪಟ್ಟಿ

ಪುತ್ತೂರು, ಮೈಸೂರು ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.50ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಳಿಗ್ಗೆ 6 ಗಂಟೆಗೆ ಮಂಗಳೂರು ತಲುಪಲಿದೆ. ಹಾಸನ ಮೂಲಕ ತೆರಳುವ ಮಲ್ಟಿ ಆ್ಯಕ್ಸೆಲ್ ಬಸ್ ಬೆಳಿಗ್ಗೆ 10ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಬೆಂಗಳೂರು ತಲುಪಲಿದೆ.

ಬೆಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಟು ಬೆಳಿಗ್ಗೆ 5.45ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಂಗಳೂರಿಗೆ 5.40ಕ್ಕೆ, ಬೆಂಗಳೂರಿನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 6.10ಕ್ಕೆ ತಲುಪಲಿದೆ.

ಹಾಸನ ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 8.30ಕ್ಕೆ ಬೆಂಗಳೂರು, ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 6.15ಕ್ಕೆ ತಲುಪಲಿದೆ. ಹಾಸನ ಮೂಲಕ ಸಾಗುವ ಮಲ್ಟಿ ಆ್ಯಕ್ಸೆಲ್ ಬಸ್ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ರಾತ್ರಿ 12.15ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.