ADVERTISEMENT

ಅ.2ಕ್ಕೆ ಮಂಗಳೂರಿನಲ್ಲಿ ‘ಕುಡ್ಲದ ಪಿಲಿ ಪರ್ಬ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:24 IST
Last Updated 24 ಸೆಪ್ಟೆಂಬರ್ 2022, 15:24 IST
ವೇದವ್ಯಾಸ ಕಾಮತ್‌
ವೇದವ್ಯಾಸ ಕಾಮತ್‌   

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ‘ಕುಡ್ಲದ ಪಿಲಿ ಪರ್ಬ’ ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷದ ಸ್ಪರ್ಧೆಯನ್ನು ಅಕ್ಟೋಬರ್‌ 2ರಂದು ಇಲ್ಲಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ‘ತುಳುನಾಡಿನಲ್ಲಿ ದಸರಾ ಮಹೋತ್ಸವದಲ್ಲಿ ಆಕರ್ಷಣೆಯಾಗಿರುವ ಹುಲಿವೇಷಕ್ಕೆ ಶತಮಾನಗಳ ಇತಿಹಾಸವಿದೆ. ನವರಾತ್ರಿಯ ಹುಲಿವೇಷ ಜಾನಪದ ಕಲೆಯಷ್ಟೇ ಅಲ್ಲ, ಇದೊಂದು ಹರಕೆ ರೂಪದ ಸೇವೆಯಾಗಿ ನಡೆಯುತ್ತ ಬಂದಿದೆ. ಇಂತಹ ಪ್ರಾಚೀನ ಪರಂಪರೆಯ ಹುಲಿವೇಷ ಮತ್ತು ಕುಣಿತದ ಸಂಪ್ರದಾಯಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡಲು ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ 15 ತಂಡಗಳು ಹೆಸರು ನೋಂದಾಯಿಸಿದ್ದು, ಸೆ.28ರವರೆಗೆ ನೋಂದಣಿಗೆ ಅವಕಾಶ ಇದೆ. ಮೊದಲ ಮೂರು ಬಹುಮಾನಗಳಿಗೆ ದೊಡ್ಡ ಮೊತ್ತದ ನಗದು, ಎಂಟು ವೈಯಕ್ತಿಕ ಬಹುಮಾನ ನೀಡಲಾಗುವುದು’ ಎಂದರು.

ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 3–4 ಸಾವಿರ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗುತ್ತದೆ. ಹುಲಿ ಟೊಪ್ಪಿ, ಟಿ ಶರ್ಟ್‌, ಮಕ್ಕಳಿಗೆ ವಾಟರ್ ಪೇಂಟ್ ಮಾಡಿಕೊಡುವ ಆಕರ್ಷಣೆಯೂ ಇರಲಿದೆ. ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ವೇಷ, ಕುಣಿತಕ್ಕೆ ಒತ್ತು ನೀಡಲಾಗಿದ್ದು, 40 ಕೆ.ಜಿ. ಅಕ್ಕಿ ಮುಡಿ ಎತ್ತು ಎಸೆಯುವ ಪ್ರದರ್ಶನವೂ ಇರಲಿದೆ. ಇಲ್ಲಿ ಆಯ್ಕೆಯಾಗುವ ತಂಡಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸುವ ಯೋಚನೆ ಇದೆ. ಸ್ಪರ್ಧೆಯು ಪುರುಷರಿಗೆ ಸೀಮಿತವಾಗಿ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವು ನೀಡಲಿದ್ದು, ಪ್ರವಾಸೋದ್ಯಮ ಇಲಾಖೆಯ ನೆರವನ್ನು ಕೋರಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರನ್ನು ಆಹ್ವಾನಿಸಲಾಗಿದೆ. ಹಲವಾರು ಸಚಿವರು ಹುಲಿವೇಷದ ಬಗ್ಗೆ ಕುತೂಹಲಿಗಳಾಗಿದ್ದು, ಬರುವುದಾಗಿ ಹೇಳಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ದಿವಾಕರ್ ಪಾಂಡೇಶ್ವರ, ಗಿರಿಧರ್ ಬಳ್ಳಾಲ್‌ಬಾಗ್, ಉದಯ್ ಕಾಮತ್, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.