
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಗುರುವಾರ ಬೆಳಿಗ್ಗೆ ಕುಮಾರಾಧಾರಾದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು.
ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಳದ ಅರ್ಚಕರಾದ ರಾಜೇಶ್ ನಡ್ಯಂತಿಲ್ಲಾಯ, ಸತ್ಯನಾರಾಯಣ ನೂರಿತ್ತಾಯ ಅವರು ಉತ್ಸವದ ವೈದಿಕ ವಿಧಿ–ವಿಧಾನಗಳಲ್ಲಿ ಸಹಕರಿಸಿದರು. ಭಕ್ತರು ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು.
ಬೆಳಿಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ನಂತರ ದೇವರ ಅವಭೃತೋತ್ಸವ ಸವಾರಿ ದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ, ಕುಮಾರಧಾರಾ ನದಿಯಲ್ಲಿ ದೇವರ ನೌಕಾವಿಹಾರ ಬಳಿಕ ಅವಭೃತೋತ್ಸವ ನಡೆಯಿತು. ಕ್ಷೇತ್ರ ಪುರೋಹಿತ ಮಧುಸೂಧನ ಕಲ್ಲೂರಾಯ ನೇತೃತ್ವದಲ್ಲಿ ಪುರೋಹಿತರು ಮಂತ್ರಘೋಷ ನೆರವೇರಿಸಿದರು.
ಕುಮಾರಧಾರ ಪುಣ್ಯತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಜಳಕ ನೆರವೇರಿತು. ಜಳಕದ ಬಳಿಕ ಕುಮಾರಧಾರಾ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಕುಮಾರ್, ಲೀಲಾಮನಮೋಹನ್, ಸೌಮ್ಯ ಭರತ್, ಪ್ರವೀಣ ಪಿ.ಕೆ., ಬ್ರಹ್ಮರಥ ದಾನಿ ಉದ್ಯಮಿ ಅಜಿತ್ ಶೆಟ್ಟಿ ಕಡಬ, ಗ್ಯಾರಂಟಿ ಅನುಷ್ಠಾನ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲ್ಯಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಅಧೀಕ್ಷಕ ಕೆ.ಎಂ.ಗೋಪನಾಥ್ ನಂಬೀಶ, ಹೆಬ್ಬಾರ್ ಪ್ರಸನ್ನ ಭಟ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್., ಶ್ರೀಮಂತ ಜೋಳದಪ್ಪಗೆ, ಸಿಬ್ಬಂದಿ ಭಾಗವಹಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ನೀರಾಟವಾಡಿತು.
ನಂತರ ದೇವಳಕ್ಕೆ ದೇವರ ಸವಾರಿ ಹೊರಟಿತು. ಅಲ್ಲಲ್ಲಿ ಭಕ್ತರು ಆರತಿ, ಹೂ, ಹಣ್ಣುಕಾಯಿ, ಕರ್ಪೂರಾರತಿಯನ್ನು ದೇವರಿಗೆ ಸಮರ್ಪಿಸಿದರು. ಅವಭೃತೋತ್ಸವ ಸವಾರಿ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದೇವಳದಲ್ಲಿ ಸಮಾಪನ ಪೂಜೆ ನಡೆಯಿತು. ಬಳಿಕ ಭಕ್ತರಿಗೆ ವಸಂತಪೂಜೆಯ ಪ್ರಸಾದ ವಿತರಿಸಲಾಯಿತು.
ಡಿ.2ರಂದು ನೀರಿನಲ್ಲಿ ಬಂಡಿ ಉತ್ಸವ: ಡಿ.2ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಅಂದು ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಅಲ್ಲದೆ, ಗೋಪುರ ನಡಾವಳಿ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.