ADVERTISEMENT

ಕುಪ್ಪೆಪದವು: 10 ದಿನ ಪೂರೈಸಿದ ಸಂತ್ರಸ್ತರ ಧರಣಿ

ಹಕ್ಕುಪತ್ರ ವಿತರಿಸಿ ಆರು ವರ್ಷಗಳ ನಂತರವೂ ಸಿಕ್ಕಿಲ್ಲ ನಿವೇಶನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 4:44 IST
Last Updated 9 ಜೂನ್ 2025, 4:44 IST
ನಿವೇಶನ ಹಸ್ತಾಂತರಕ್ಕೆ ಒತ್ತಾಯಿಸಿ ಕುಪ್ಪೆಪದವಿನ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಧರಣಿ ನಡೆಸಿದ ಮಹಿಳೆಯರು ಪ್ರತಿಭಟನೆಯ ವೇದಿಕೆಯಲ್ಲೇ ಬೀಡಿ ಕಟ್ಟಿದರು   
ನಿವೇಶನ ಹಸ್ತಾಂತರಕ್ಕೆ ಒತ್ತಾಯಿಸಿ ಕುಪ್ಪೆಪದವಿನ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಧರಣಿ ನಡೆಸಿದ ಮಹಿಳೆಯರು ಪ್ರತಿಭಟನೆಯ ವೇದಿಕೆಯಲ್ಲೇ ಬೀಡಿ ಕಟ್ಟಿದರು      

ಮಂಗಳೂರು: ಸ್ವಂತ ಮನೆ, ಸ್ವಂತ ಜಮೀನು ಇಲ್ಲದ 97 ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಆರು ವರ್ಷಗಳ ಬಳಿಕವೂ ನಿವೇಶನ ಹಸ್ತಾಂತರ ಮಾಡಿಲ್ಲ ಎಂದು ಆರೋಪಿಸಿ ಸಂತ್ರಸ್ತರು ತಾಲ್ಲೂಕಿನ ಕುಪ್ಪೆಪದವು ಗ್ರಾಮ ಪಂಚಾಯಿತಿ ಎದುರು ನಡೆಸುತ್ತಿರುವ ಧರಣಿ ಭಾನುವಾರ ಹತ್ತು ದಿನಗಳನ್ನು ಪೂರೈಸಿದೆ. ಸಂತ್ರಸ್ತರು ಮಳೆಯನ್ನೂ ಲೆಕ್ಕಿಸದೇ ಧರಣಿ  ಮುಂದುವರಿಸಿದ್ದಾರೆ.

‘ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದವು.  ಆರು ವರ್ಷಗಳ ಹಿಂದೆ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ನಿವೇಶನದ ಹಕ್ಕುಪತ್ರ ವಿತರಿಸಲಾಗಿತ್ತು. ಈವರೆಗೂ ನಿವೇಶನ ಹಸ್ತಾಂತರವಾಗಿಲ್ಲ. ಆ ಬಳಿಕ ಭರತ್ ಶೆಟ್ಟಿ ಇತ್ತ ತಿರುಗಿಯೂ ನೋಡಿಲ್ಲ. ಹಾಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದೇವೆ’ ಎಂದು ಧರಣಿ ನಿರತರು ತಿಳಿಸಿದ್ದಾರೆ.

ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ಧರಣಿ ಸ್ಥಳಕ್ಕೆ ಕೆಲ ದಿನಗಳ ಹಿಂದೆ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಅವರ ಬೇಡಿಕೆಯನ್ನು ಆಲಿಸಿದ್ದರು. ಆದಷ್ಟು ಬೇಗ ನಿವೇಶನ ಹಸ್ತಾಂತರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಿವೇಶನ ಹಸ್ತಾಂತರ ಆಗದೇ ಧರಣಿ ಕೈಬಿಡುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.

ADVERTISEMENT

ಸಂತ್ರಸ್ತರಲ್ಲಿ ಬಹುತೇಕರು ಬೀಡಿ ಕಾರ್ಮಿಕರು. ಧರಣಿಯಿಂದಾಗಿ ದುಡಿಮೆಯ ಮೂಲವಾದ ಬೀಡಿ ಕಟ್ಟುವ ಕಾಯಕವನ್ನು ಮುಂದುವರಿಸಲು ಸಮಸ್ಯೆಯಾಗಿತ್ತು. ಧರಣಿ ನಡೆಸುವ ಸ್ಥಳಕ್ಕೇ ಅವರು ಸೂಪು, ಎಲೆ, ಸೊಪ್ಪು, ಕತ್ತರಿ, ಅಚ್ಚು, ನೂಲನ್ನು ತಂದು, ಅಲ್ಲೇ ಬೀಡಿ ಕಟ್ಟಲು ಶುರು ಮಾಡಿದ್ದಾರೆ. ಗ್ರಾಮದ ಯುವಕರು ಧರಣಿ ನಿರತರಿಗೆ ಬೆಂಬಲವಾಗಿ ನಿಂತಿದ್ದಾರೆ.

ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಯೋಗವು ಧರಣಿಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು.

‘ಕೋಮು ಸಂಬಂಧಿತ ವಿಷಯಗಳಿಗೆ ಎದ್ದು ಬಿದ್ದು ಪ್ರತಿಕ್ರಿಯಿಸುವ ಇಲ್ಲಿನ ರಾಜಕಾರಣಿಗಳು, ಜನಪ್ರತಿನಿಧಿಗಳು ಬಡವರ ಬದುಕಿನ ವಿಚಾರಗಳಲ್ಲಿ ಸಂವೇದನಾ ಶೂನ್ಯರು. ನಿವೇಶನ ಸಿಗದೇ ಧರಣಿ ಹಿಂಪಡೆಯುವುದಿಲ್ಲ ಎಂದು ಹೋರಾಟ ಸಮಿತಿ  ತಿಳಿಸಿದೆ. ನಿಮ್ಮ ಜೊತೆ ನಾವಿದ್ದೇವೆ. ಬೇಡಿಕೆ ಈಡೇರದೇ ಇದ್ದರೆ  ಧರಣಿ ಮಂಟಪದಲ್ಲೆ ಠಿಕಾಣಿ ಹೂಡಲಿದ್ದೇವೆ. ಜನರ ಬದುಕಿನ ಪ್ರಶ್ನೆಗಳ ಮೇಲಿನ ಹೋರಾಟ ಸೋಲಬಾರದು’ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.