ADVERTISEMENT

ಪುತ್ತೂರು: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗ ಬದಲಾವಣೆ; ಪ್ರತಿಭಟನೆ

ಸ್ಥಳ ಬದಲಾವಣೆ ಆರೋಪ: ರಾಜ್ಯದಾದ್ಯಂತ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 16:32 IST
Last Updated 8 ನವೆಂಬರ್ 2021, 16:32 IST
ಪುತ್ತೂರು ನಗರದಲ್ಲಿ ತಾಲ್ಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಲಾಗಿದ್ದ ಸ್ಥಳವನ್ನು ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಅಂಬೇಡ್ಕರ್‌ ಭವನ ನಿರ್ಮಾಣ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ಪುತ್ತೂರು ನಗರದಲ್ಲಿ ತಾಲ್ಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಲಾಗಿದ್ದ ಸ್ಥಳವನ್ನು ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಅಂಬೇಡ್ಕರ್‌ ಭವನ ನಿರ್ಮಾಣ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.   

ಪುತ್ತೂರು: ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗವನ್ನು ಶಾಸಕರು ಮತ್ತು ಅಧಿಕಾರಿಗಳು ಸೇರಿಕೊಂಡು ಏಕಾಏಕಿ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಅದೇ ಸ್ಥಳದಲ್ಲಿ ಭವನ ನಿರ್ಮಿಸುವಂತೆ ಒತ್ತಾಯಿಸಿ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಅಂಬೇಡ್ಕರ್‌ ಭವನ ನಿರ್ಮಾಣ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಛಲವಾದಿ ಯುವ ಬ್ರಿಗೇಡ್‌ನ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಮಂಡ್ಯ ಮಾತನಾಡಿ, ’ಪುತ್ತೂರಿನ ಶಾಸಕರಿಗೆ ಪರಿಶಿಷ್ಟರ ಬಗ್ಗೆ ಮಾನವೀಯತೆ, ಕಾಳಜಿ ಇದ್ದಲ್ಲಿ, ಶೀಘ್ರದಲ್ಲೇ, ಮೊದಲೇ ಗುರುತಿಸಿದ್ದ ಸ್ಥಳದಲ್ಲೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಮುಖಂಡ ಜಗದೀಶ್ ಪಾಂಡೇಶ್ವರ ಮಾತನಾಡಿ, ‘ಇಲ್ಲಿನ ಅಧಿಕಾರಿಗಳು ಹಾಗೂ ಶಾಸಕರು ಅಂಬೇಡ್ಕರ್ ಸಂವಿಧಾನದ ಫಲವಾಗಿ ಅಧಿಕಾರದಲ್ಲಿದ್ದಾರೆ. ಆದರೆ, ಈಗ ಅವರು ಶೋಷಿತ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ಶಾಸಕರಿಗೆ ನಮ್ಮ ಬಗ್ಗೆ ಕಾಳಜಿ ಇದ್ದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದು ಬದ್ಧತೆ ಪ್ರದರ್ಶಿಸಬೇಕಿತ್ತು’ ಎಂದರು.

ADVERTISEMENT

’ಮುಂದಿನ 15 ದಿನಗಳ ಒಳಗಾಗಿ ಸಮಸ್ಯೆ ಇತ್ಯರ್ಥಪಡಿಸದಿದ್ದಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು, ವಿಧಾನಸೌಧ ಚಲೋ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪರಿಶಿಷ್ಟ ಸಂಘಟನೆಗಳ ಜಿಲ್ಲಾ ಮುಖಂಡ ಆನಂದ ಬೆಳ್ಳಾರೆ ಮಾತನಾಡಿ, ’ಎರಡು ದಶಕಗಳ ಹೋರಾಟದ ಫಲವಾಗಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 19 ಸೆಂಟ್ಸ್ ಜಾಗ ಮಂಜೂರಾಗಿ ಪಹಣಿ ಪತ್ರವೂ ಆಗಿತ್ತು. ಪಹಣಿ ಪತ್ರ ರದ್ದತಿಗೆ ಕನಿಷ್ಠ 45 ದಿನಗಳು ಬೇಕು. ಆದರೆ, ನಮ್ಮ ಗಮನಕ್ಕೆ ಬಾರದಂತೆ ಕೇವಲ ಒಂದೇ ದಿನದಲ್ಲಿ ಪಹಣಿ ಪತ್ರ ರದ್ದುಗೊಳಿಸಲಾಗಿದೆ’ ಎಂದು ಆರೋಪಿಸಿದರು.

ಅಂಬೇಡ್ಕರ್ ಭವನ ಹೋರಾಟ ಸಮಿತಿಯ ಮುಖಂಡ ಸೇಸಪ್ಪ ನೆಕ್ಕಿಲು, ಸೇಸಪ್ಪ ಬೆದ್ರಕಾಡು, ಜಗದೀಶ್ ಕಜೆ, ಸೋಮನಾಥ್ ಬೆಳ್ಳಿಪ್ಪಾಡಿ, ಬಾಬು ಸವಣೂರು, ಗಿರಿಧರ್ ನಾಯ್ಕ್, ಚಂದು ಎನ್, ಮುಖೇಶ್ ಕೆಮ್ಮಿಂಜೆ, ಅಚ್ಚುತ ಮುಲ್ಕಾಜೆ, ನೇಮಿರಾಜ್ ಕಿಲ್ಲೂರು, ವೆಂಕಣ್ಣ ಕೊಯ್ಯೂರು, ಆನಂದ ಪಡುಬೆಟ್ಟು ಮಾತನಾಡಿದರು. ತಹಶೀಲ್ದಾರ್‌ ರಮೇಶ್ ಬಾಬು ಮೂಲಕ ಪ್ರತಿಭಟನಕಾರರು ಮನವಿ ಸಲ್ಲಿಸಿದರು.

‘ಅಧಿಕಾರಿಗಳ ವಿರುದ್ಧ ದೂರು’
‘ರದ್ದು ಮಾಡಲಾದ ಪಹಣಿ ಪತ್ರವನ್ನು ಹಿಂದಿನಂತೆ ಮರು ದಾಖಲೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳು ಪುತ್ತೂರಿಗೆ ಬಂದಾಗ ಅವರಿಗೆ ಘೇರಾವ್‌ ಹಾಕಲಾಗುವುದು. ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.