ADVERTISEMENT

ಆರೋಗ್ಯ ವ್ಯವಸ್ಥೆ ಬಲಪಡಿಸಲು ಜನಾಂದೋಲನ

ಸಮಾನ ಮನಸ್ಕರ, ಸಾಮಾಜಿಕ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:48 IST
Last Updated 22 ಸೆಪ್ಟೆಂಬರ್ 2020, 14:48 IST
ಸಮಾನ ಮನಸ್ಕ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆ ಮಂಗಳವಾರ ಮಂಗಳೂರಿನಲ್ಲಿ ನಡೆಯಿತು. ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿದರು
ಸಮಾನ ಮನಸ್ಕ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆ ಮಂಗಳವಾರ ಮಂಗಳೂರಿನಲ್ಲಿ ನಡೆಯಿತು. ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿದರು   

ಮಂಗಳೂರು: ಸಾರ್ವಜನಿಕರಿಗೆ ಸಮರ್ಪಕ ಹಾಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡಲು ಜನಾಂದೋಲನ ರೂಪಿಸುವುದು. ಅದಕ್ಕಾಗಿ ಆಗ್ರಹಿಸಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಸಮಾನ ಮನಸ್ಕ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆ ನಿರ್ಧರಿಸಿದೆ.

ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ‘ಜಿಲ್ಲಾ ಆರೋಗ್ಯ ನಿಯಂತ್ರಣ ಪ್ರಾಧಿಕಾರದ ಸಭೆಯನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ಕರೆಯಬೇಕು. ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕೋವಿಡ್ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು. ಸರ್ಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲೆಯಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯಬೇಕು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 900 ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಆಗ್ರಹಿಸಲಾಯಿತು.

ಆರೋಗ್ಯ ಜನರ ಹಕ್ಕು ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಜನಾಂದೋಲನ ರೂಪಿಸಲು ನಿರ್ಧರಿಸಲಾಯಿತು.

ADVERTISEMENT

‘ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ’ ಎಂಬ ಧ್ಯೇಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಗಂಭೀರ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆ, ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆ ನಡೆದಿತ್ತು.

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಹಿರಿಯ ವೈದ್ಯ ಡಾ.ಶ್ರೀನಿವಾಸ್ ಕಕ್ಕಿಲಾಯ, ಡಿಎಸ್‌ಎಸ್ ಮುಖಂಡ ಎಂ.ದೇವದಾಸ್, ಸಾಮಾಜಿಕ ಮುಖಂಡ ಎಂ.ಜಿ ಹೆಗಡೆ, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ ಬೈಲ್, ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಫಾರೂಕ್ ಉಳ್ಳಾಲ್, ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ, ದಯಾನಾಥ್ ಕೋಟ್ಯಾನ್, ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಸಿಪಿಎಂ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ರೈತ ಮುಖಂಡ ಕೆ. ಯಾದವ ಶೆಟ್ಟಿ, ಸಿಪಿಐ ಮುಖಂಡ ಎಚ್.ವಿ.ರಾವ್, ಕರುಣಾಕರ್, ಎಐವೈಎಫ್ ಮುಖಂಡ ಸೀತರಾಮ್ ಬೇರಿಂಜೆ, ರೈತ ಮುಖಂಡ ರೋಸ್ವಾಲ್ಡ್ ಫೆರ್ನಾಂಡಿಸ್, ಸಮುದಾಯ ಮುಖಂಡರಾದ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಕೃಷ್ಣ ತಣ್ಣೀರುಬಾವಿ, ತಿಮ್ಮಯ್ಯ ಕೊಂಚಾಡಿ, ಆಶಾ ಬೋಳೂರು, ಅಸುಂತ ಡಿಸೋಜ, ಎಸ್.ಎಫ್.ಐ ಮುಖಂಡರಾದ ಮಾಧುರಿ ಬೋಳಾರ್, ಪ್ರಮಿಳಾ ದೇವಾಡಿಗ, ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್, ಅಶ್ರಫ್ ಕೆ.ಸಿ.ರೋಡ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ರಫೀಕ್ ಹರೇಕಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.