ADVERTISEMENT

ಚರ್ಮಗಂಟು ರೋಗ: ಹೈನೋದ್ಯಮಕ್ಕೆ ಪೆಟ್ಟು

ಉತ್ಪಾದನೆಗಿಂತ ಶೇ 20ರಷ್ಟು ಹಾಲಿನ ಬೇಡಿಕೆ ಹೆಚ್ಚಳ: ಒಕ್ಕೂಟಕ್ಕೆ ₹3 ಕೋಟಿ ಹೊರೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 16:26 IST
Last Updated 30 ಮಾರ್ಚ್ 2023, 16:26 IST
ಸುಚರಿತ ಶೆಟ್ಟಿ
ಸುಚರಿತ ಶೆಟ್ಟಿ   

ಮಂಗಳೂರು: ಜಾನುವಾರುಗಳಿಗೆ ಬಾಧಿಸಿದ ಚರ್ಮಗಂಟು ರೋಗವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಉಭಯ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಇಳಿಮುಖವಾದ ಕಾರಣ ಗ್ರಾಹಕರ ಬೇಡಿಕೆಯನ್ನು ಸರಿದೂಗಿಸಲು ಹೊರಜಿಲ್ಲೆಯ ಹಾಲು ಒಕ್ಕೂಟವನ್ನು ಆಶ್ರಯಿಸಬೇಕಾಗಿದೆ.

ಕರಾವಳಿ ಜಿಲ್ಲೆಯಲ್ಲಿ ಕೋವಿಡ್‌ ನಂತರ ಹೈನುಗಾರರ ಸಂಖ್ಯೆ ಮತ್ತು ಹಾಲು ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿತ್ತು. ಜಿಲ್ಲೆಯ ಬೇಡಿಕೆಗಿಂತ ಶೇ 20ರಿಂದ 30ರಷ್ಟು ಅಧಿಕ ಹಾಲು ಉತ್ಪಾದನೆಯಾಗುತ್ತಿತ್ತು. ಈ ಮಧ್ಯೆ ಚರ್ಮಗಂಟು ರೋಗವು ಕ್ಷೀರೋದ್ಯಮಕ್ಕೆ ಹೊಡೆತವನ್ನು ನೀಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬೇಡಿಕೆಗಿಂತ ಶೇ 20ರಷ್ಟು ಹಾಲಿನ ಉತ್ಪಾದನೆ ಕೊರತೆಯಾಗಿದ್ದು, ಅದನ್ನು ಸರಿದೂಗಿಸುವುದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಿದೆ.

2022ರ ಫೆಬ್ರುವರಿಯಲ್ಲಿ ಉಭಯ ಜಿಲ್ಲೆಯಲ್ಲಿ ದಿನನಿತ್ಯ 5.02 ಲಕ್ಷ ಲೀಟರ್‌ ಉತ್ಪಾದನೆಯಾಗಿ, 3.55 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಆದರೆ, ಕಳೆದ ಐದಾರು ತಿಂಗಳುಗಳಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಲೇ ಇದ್ದು, ಪ್ರಸ್ತುತ ದಿನಕ್ಕೆ ಸರಾಸರಿ 4.30 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತದೆ. ಇದೇ ಸಂದರ್ಭದಲ್ಲಿ ಹಾಲಿನ ಬೇಡಿಕೆ 5 ಲಕ್ಷ ಲೀಟರ್‌ ದಾಟಿದ್ದು, ಈ ಕೊರತೆಯನ್ನು ತುಂಬಿಸಲು ಮಂಡ್ಯ ಮತ್ತು ಹಾಸನ ಹಾಲು ಒಕ್ಕೂಟದಿಂದ ಖರೀದಿಸಲಾಗುತ್ತಿದೆ.‌

ADVERTISEMENT

‘ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿದ ಬಳಿಕ ದೇಶದಲ್ಲೇ ಹಾಲಿನ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿ, ಈ ನಿಧಾನವಾಗಿ ಚೇತರಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಹಾಲಿನ ಉತ್ಪಾದನೆ ಸ್ವಲ್ಪ ಕುಸಿದಿದೆ. ಈ ಮದ್ಯೆ ಜಿಲ್ಲೆಯಲ್ಲಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ರಂಜಾನ್‌ ಮುಂತಾದ ಕಾರಣಗಳಿಂದ ಹಾಲಿನ ಬೇಡಿಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ, ದಿನಕ್ಕೆ 50–60 ಸಾವಿರ ಲೀಟರ್‌ ಹಾಲು ಕೊರತೆಯಾಗುತ್ತಿದೆ. ಅದಕ್ಕಾಗಿ ಹೊರ ಜಿಲ್ಲೆಯ ಒಕ್ಕೂಟದಿಂದ ಲೀಟರ್‌ ಹಾಲಿಗೆ ₹41 ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಇದು ಒಕ್ಕೂಟಕ್ಕೆ ಸುಮಾರು ₹2ರಿಂದ ₹3 ಕೋಟಿಯಷ್ಟು ಹೊರೆಯಾಗಬಹುದು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ.

‘ಅಧಿಕ ಕೊಬ್ಬಿನಾಂಶವಿರುವ ಸಮೃದ್ಧಿ ಮತ್ತು ತೃಪ್ತಿ ಹಾಲಿಗೆ ಕರಾವಳಿ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇತ್ತು. ಈಗ ಹಾಲಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ಒಕ್ಕೂಟವೂ ಸಾದಾ ಹಾಲಿನ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಉತ್ಪಾದನೆ ಜಾಸ್ತಿಯಾದ ಕೂಡಲೇ ಈ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಒಂದೆರಡು ತಿಂಗಳಲ್ಲಿ ಹಾಲಿನ ಉತ್ಪಾದನೆ ಮತ್ತು ಬೇಡಿಕೆ ಸರಿದೂಗುವ ನಿರೀಕ್ಷೆ ಹೊಂದಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‌‘ಯುವಜನರನ್ನು ಆಕರ್ಷಿಸಲು ಯೋಜನೆ’
‘ಒಕ್ಕೂಟವು ಹೈನುಗಾರರಿಗೆ ಲೀಟರ್‌ ಹಾಲಿಗೆ ₹32 ಮತ್ತು ₹5 ಸಹಾಯಧನ ನೀಡುತ್ತಿದ್ದು, ಗುಣಮಟ್ಟ ಉತ್ತಮವಾಗಿದ್ದರೆ ಇನ್ನೂ ಒಂದೆರಡು ರೂಪಾಯಿ ಹೆಚ್ಚು ನೀಡಲಾಗುತ್ತಿದೆ. ಈ ಮಧ್ಯೆ ಕೇರಳದಲ್ಲಿ ಇಲ್ಲಿನ ದರಕ್ಕಿಂತ ₹10 ಹೆಚ್ಚು ನೀಡುತ್ತಿದ್ದು, ಗಡಿಭಾಗದ ಹೈನುಗಾರರು ಅಲ್ಲಿಗೆ ಪೂರೈಸುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ.

‘ಹೈನುಗಾರಿಕೆಯತ್ತ ಯುವಜನರನ್ನು ಆಕರ್ಷಿಸಲು ಒಕ್ಕೂಟದ ಬಜೆಟ್‌ನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಸಹಾಯಧನ, ಬಡ್ಡಿರಹಿತ ಸಾಲ ವಿತರಣೆ ಮಾಡುವ ಚಿಂತನೆಯಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.