ADVERTISEMENT

ಧರ್ಮಸ್ಥಳ: ರಾತ್ರಿ ಇಡೀ ಶಿವರಾತ್ರಿ ಜಾಗರಣೆ

ನಾಲ್ಕು ಜಾವಗಳಲ್ಲಿ ಶತರುದ್ರಾಭಿಷೇಕ, ಸೀಯಾಳ ಅಭಿಷೇಕ ಸೇವೆ ಅರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 16:10 IST
Last Updated 26 ಫೆಬ್ರುವರಿ 2025, 16:10 IST
ಧರ್ಮಸ್ಥಳ ಕ್ಷೇತ್ರದ ಮಂಜುನಾಥ ದೇವಸ್ಥಾನದ ಮುಂಭಾಗದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾಗರಣೆ ನಡೆಸಿದರು
ಧರ್ಮಸ್ಥಳ ಕ್ಷೇತ್ರದ ಮಂಜುನಾಥ ದೇವಸ್ಥಾನದ ಮುಂಭಾಗದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾಗರಣೆ ನಡೆಸಿದರು   

ಉಜಿರೆ: ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಬುಧವಾರ ಸಾವಿರಾರು ಭಕ್ತರು ಶಿವ ನಾಮಸ್ಮರಣೆ ಮಾಡುತ್ತಾ ಜಾಗರಣೆ ನಡೆಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣ ಮಾಡುವ ಮೂಲಕ ಶಿವರಾತ್ರಿ ಜಾಗರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು. 

ಬಳಿಕ ಭಕ್ತರು ರಾತ್ರಿ ಪೂರ್ತಿ ಸಾಮೂಹಿಕ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರು. ನಾಲ್ಕು ಜಾವಗಳಲ್ಲಿ ಭಕ್ತರು ದೇವಸ್ಥಾನದಲ್ಲಿ ದೇವರಿಗೆ ಶತರುದ್ರಾಭಿಷೇಕ ಮತ್ತು ಸೀಯಾಳ ಅಭಿಷೇಕ ಸೇವೆ ಅರ್ಪಿಸಿದರು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ, ‘ಶಿವರಾತ್ರಿ ಅಂದರೆ ಪವಿತ್ರ ಹಾಗೂ ಮಂಗಳಕರ ರಾತ್ರಿ ಎಂದು ಅರ್ಥ. ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ ಕಳೆದು ಪುಣ್ಯ ಸಂಚಯವಾಗುತ್ತದೆ. ತ್ಯಾಗ ಮತ್ತು ವಿರಕ್ತಿಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಜಪ-ತಪ, ಧ್ಯಾನದೊಂದಿಗೆ ವೃತ ನಿಯಮಗಳ ಪಾಲನೆ ಮಾಡಿದಾಗ ಜೀವನ ಪಾವನವಾಗುತ್ತದೆ’ ಎಂದರು.

ADVERTISEMENT

‘ಮಾತು ಬಿಡ ಮಂಜುನಾಥ ಎಂಬ ಮಾತು ಪ್ರಚಲಿತವಿದೆ. ನಮ್ಮ ಮಾತು ಮತ್ತು ಕೃತಿಗೆ ಅಂತರ ಇರಬಾರದು. ನುಡಿದಂತೆ ನಡೆಯಬೇಕು. ಆಗ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಎಲ್ಲವೂ ಸುಗಮವಾಗಿ ಜೀವನ ಪಾವನವಾಗುತ್ತದೆ. ಮನದಲ್ಲಿರುವ ಕೆಟ್ಟ ಯೋಚನೆ, ಭಾವನೆಗಳನ್ನು ತ್ಯಜಿಸಿ ಎಲ್ಲರೂ ಸುಖಿಗಳಾಗಿರಲಿ ಎಂಬ ಉದಾತ್ತ ಭಾವನೆಯೊಂದಿಗೆ ಲೋಕ ಕಲ್ಯಾಣವಾಗಲಿ ಎಂದು ಶುಭ ಚಿಂತನೆ ಮಾಡಬೇಕು. ಆಗ ಕಾಲಕ್ಕೆ ಸರಿಯಾಗಿ ಮಳೆ, ಬೆಳೆ ಆಗಿ ಎಲ್ಲೆಲ್ಲೂ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ’ ಎಂದು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ‌, ಸುಪ್ರಿಯಾ ಹರ್ಷೇಂದ್ರ ಕುಮಾರ್, ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಮರಿಯಪ್ಪ, ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಮತ್ತು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಭಾಗವಹಿಸಿದ್ದರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.