ADVERTISEMENT

ಮಹಾಕಾಲೇಶ್ವರ ದೇವರ ಬ್ರಹ್ಮಕಲಶ 15ರಿಂದ

​ಪ್ರಜಾವಾಣಿ ವಾರ್ತೆ
Published 10 ಮೇ 2025, 8:08 IST
Last Updated 10 ಮೇ 2025, 8:08 IST
ಸುದ್ದಿಗೋಷ್ಠಿಯಲ್ಲಿ ನಳಿನ್‌ ಕುಮಾರ್ ಕಟೀಲ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ನಳಿನ್‌ ಕುಮಾರ್ ಕಟೀಲ್ ಮಾತನಾಡಿದರು   

ಮಂಗಳೂರು: ಗುರುಪುರ ಫಲ್ಗುಣಿ ನದಿತಟದ ಗೋಳಿದಡಿಗುತ್ತು ಗುರುಪುರದ ಗುರುಮಹಾಕಾಲೇಶ್ವರ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮವು ಮೇ 15ರಿಂದ 17ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿರುವ ಗುರುಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿ ಇದಾಗಿದ್ದು, ವೇದಕೃಷಿಕ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ವೇದೋಕ್ತ ವಿಧಿಗಳೊಂದಿಗೆ ಪ್ರತಿಷ್ಠೆ, ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಭಕ್ತರು ಜಾತಿ, ಮತ ಭೇದವಿಲ್ಲದೆ ಇಲ್ಲಿ ದೇವರನ್ನು ಸ್ಪರ್ಶಿಸಿ ಪೂಜೆ ಮಾಡಬಹುದಾಗಿದೆ ಎಂದರು.

ಮೇ 15ರಂದು  ಶುದ್ಧಿ ಪ್ರಕ್ರಿಯೆ, ವಾಸ್ತುಶುದ್ಧಿ ಸಹಿತ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 9ರಿಂದ ಭಜನೆ, ಯಕ್ಷಗಾನ, ಸಂಜೆ 5ರಿಂದ ಭಗವದ್ಗೀತೆ ಪ್ರವಚನ, ಭರತನಾಟ್ಯ, ನೃತ್ಯಾಂಜಲಿ, ಮೇ 16ರಂದು ಸಂಜೆ 4 ಗಂಟೆಯಿಂದ ಮಹಾಕಾಲೇಶ್ವರ ದೇವರ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕ, ಹಾಲು, ಎಳನೀರು, ಕುಂಕುಮ, ಹರಿದ್ರೋದಕ ಮತ್ತು ಗಂಧೋದಕ ಸಹಿತ ಪಂಚ ಕಲ್ಯಾಣಯುಕ್ತ ಅಭಿಷೇಕ, ಬೆಳಿಗ್ಗೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಮೇ 17ರಂದು ಬೆಳಿಗ್ಗೆ ಭಜನೆ, ಹರಿಕಥಾ ಪ್ರವಚನ, ಭಗವದ್ಗೀತಾ ಪ್ರವಚನ, ನೃತ್ಯ ವೈಭವ ಜರುಗಲಿದೆ ಎಂದರು.

ADVERTISEMENT

ಕ್ಷೇತ್ರದ ಅಧ್ಯಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಮೇ 16ರಂದು ದೇವಸ್ಥಾನದ ಕಾರ್ಯಾಲಯ, ಸಭಾಂಗಣ ಹಾಗೂ ಅತಿಥಿಗೃಹವನ್ನು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಗುರುಗಳು ಉದ್ಘಾಟಿಸುವರು. ಮೇ 14ರ ಮಧ್ಯಾಹ್ನ 3ರಿಂದ ಮೇ 15ರ ಸಂಜೆ 6ರವರೆಗೆ ಹೊರೆಕಾಣಿಕೆ ಸಮರ್ಪಿಸಬಹುದು. ಗುರುಮಹಾಕಾಲೇಶ್ವರ ಮೂರ್ತಿಯನ್ನು ಬೆಳ್ತಂಗಡಿ ಮಂಜುಶ್ರೀ ಶಿಲ್ಪಕಲಾಶಾಲೆಯ ವೆಂಕಟೇಶ ಆಚಾರ್ಯ ಮಾರ್ಗದರ್ಶನದಲ್ಲಿ ಕುಮಾರ ಶರ್ಮ ಅವರು ರಚಿಸಿದ್ದಾರೆ ಎಂದರು.

ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ಉಷಾ ಪ್ರಸಾದ್ ಶೆಟ್ಟಿ, ದಿವಾಕರ ಸಾಮಾನಿ, ಯಶವಂತ್ ಸಾಲ್ಯಾನ್ ಮೂಲ್ಕಿ, ನಾರಾಯಣ, ಸತೀಶ್ ಕಾವ, ಸುನಿಲ ಪ್ರಭಾಕರ ಶೆಟ್ಟಿ, ರತನ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.