ಬೆಳ್ತಂಗಡಿ: ‘ಮಹಿಳಾ ಮಂಡಳಗಳ ಒಕ್ಕೂಟವು ಪ್ರೇರಣೆಯಾಗುವ ರೀತಿಯಲ್ಲಿ ಬೆಳೆದು ಸಶಕ್ತ ಸಮಾಜ ನಿರ್ಮಾಣಕ್ಕೆ ಅಣಿಯಾಗಲಿ. ಒಕ್ಕೂಟಕ್ಕೆ ಶಾಸಕರ ನಿಧಿಯಿಂದ ₹ 2.50 ಲಕ್ಷ ಅನುದಾನ ನೀಡುತ್ತೇನೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ಐ.ಬಿ ರಸ್ತೆಯಲ್ಲಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ಸೋಮವಾರ ನಡೆದ ಬೆಳ್ತಂಗಡಿ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಒಕ್ಕೂಟದಲ್ಲಿ ಮಹಿಳಾ ಪ್ರತಿನಿಧಿಗಳು ಹೆಚ್ಚು ಪಾಲ್ಗೊಳ್ಳಬೇಕು. ಇದಕ್ಕೆ ಪೂರಕವಾಗಿ ತಾಲ್ಲೂಕಿನಲ್ಲಿ ಜಿ.ಪಂ., ತಾ.ಪಂ., ಗ್ರಾ.ಪಂ., ಮಹಿಳಾ ಸದಸ್ಯರನ್ನು ಒಕ್ಕೂಟದ ಪ್ರತಿನಿಧಿಗಳಾಗಿ ಸೇರಿಸಲು ಇಒ ಹಾಗೂ ಸಿಡಿಪಿಒ ಅವರೊಂದಿಗೆ ಸಭೆ ನಡೆಸಿ ನಿರ್ದೇಶಿಸಲಾಗುವುದು. ಸಹಕಾರಿ ಕ್ಷೇತ್ರ ಹಾಗೂ ಹಾಲು ಉತ್ಪಾದಕರ ಸಂಘದ ನಿರ್ದೇಶಕಿಯರನ್ನು ಸೇರಿಸಿಕೊಂಡರೆ ಸದೃಢವಾದ ಒಕ್ಕೂಟ ನಿರ್ಮಾಣವಾಗುತ್ತದೆ’ ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಂಗಣ ಉದ್ಘಾಟಿಸಿ, ‘ಗ್ರಾಮೀಣ ಪ್ರದೇಶದಲ್ಲೂ ಮಹಿಳೆಯರು ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳು ನಡೆಯುತ್ತಿದೆ. ನಾವೆಲ್ಲರೂ ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು’ ಎಂದರು.
ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕಿ ಅಶ್ವಿನಿ, ವಕೀಲರಾದ ಮನೋಹರ ಕುಮಾರ್ ಇಳಂತಿಲ, ಅನಿಲ್ ಕುಮಾರ್, ಒಕ್ಕೂಟದ ಉಪಾಧ್ಯಕ್ಷೆ ಉಮಾ ಆರ್.ರಾವ್, ಜತೆ ಕಾರ್ಯದರ್ಶಿ ವಿನೋದಿನಿ ರಾಮಪ್ಪ, ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ ಭಾಗವಹಿಸಿದ್ದರು.
ನಿವೃತ್ತ ಆರೋಗ್ಯಾಧಿಕಾರಿ ಭಾರತಿ ಪಿ.ವಿ. ಅವರನ್ನು ಸನ್ಮಾನಿಸಲಾಯಿತು. ಸಭಾಂಗಣ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಯಶೋದಾ ಲಾಯಿಲ, ಗಾಯತ್ರಿ, ಶ್ವೇತಾ ಪ್ರಾರ್ಥಿಸಿದರು. ಸಂಚಾಲಕಿ ಲೋಕೇಶ್ವರಿ ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷೆ ಶಾಂತ ಬಂಗೇರ ಸ್ವಾಗತಿಸಿ, ಹೇಮಾವತಿ ಕೆ. ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಆಶಾ ಸತೀಶ್ ವಂದಿಸಿರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸೌಮ್ಯಾಶ್ರೀ ಗರ್ಡಾಡಿ ಮತ್ತು ಮಹೇಶ್ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.