ADVERTISEMENT

ಮಳಲಿ ಮಸೀದಿ ವಿವಾದ: ಕಮಿಷನರ್‌ ನೇಮಕಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:29 IST
Last Updated 22 ಜೂನ್ 2022, 20:29 IST
   

ಬೆಂಗಳೂರು:‘ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲು ಕಮಿಷನರ್ ನೇಮಕ ಮಾಡಬೇಕು’ ಎಂದು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್‌ಗೆ ಮನವಿ ಮಾಡಿದರು.

ಮಂಗಳೂರಿನ ತೆಂಕ ಎಡಪಾಡಿಯ ಧನಂಜಯ್ ಹಾಗೂ ಬಡಗು ಎಡಪಾಡಿಯ ಮನೋಜ್ ಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯ
ಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಿವೇಕ್ ಸುಬ್ಬಾರೆಡ್ಡಿ, ‘ಮಸೀದಿಯ ಒಳಗೆ ದೇವಾಲಯವಿತ್ತೋ, ಇಲ್ಲವೋ ಎಂಬ ಬಗ್ಗೆ ಸ್ಥಳ ಸಮೀಕ್ಷೆ ನಡೆಸಿಯೇ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಇದನ್ನು ಪಕ್ಷಗಾರರು ಅಥವಾ ಬೇರೆಯವರು ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ತಂತ್ರಜ್ಞಾನದ ಮೂಲಕ ಮಾತ್ರ ಮಾಡಲು ಸಾಧ್ಯ. ಆದ್ದರಿಂದ, ಮಸೀದಿಯ ಪರಿಶೀಲನೆಗೆ ಕಮಿಷನರ್ ನೇಮಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಪೂರ್ವನಿದರ್ಶನವಾಗಿಜ್ಞಾನವಾಪಿ ಮಸೀದಿ ಪ್ರಕರಣವನ್ನು ವಿವರಿಸಿದವಿವೇಕ್‌ ಸುಬ್ಬಾರೆಡ್ಡಿ, ‘ಅಲ್ಲಿಯೂ ಕೂಡಾ ಅರ್ಜಿಯ ವಿಚಾರಣಾ ಮಾನ್ಯತೆಯ ಕುರಿತ ಪ್ರಶ್ನೆ ಉದ್ಭವವಾಗಿತ್ತು. ಆದರೆ, ನ್ಯಾಯಾಲಯ; ಮೊದಲು ಸ್ಥಳ ಪರಿಶೀಲನೆ ನಡೆಯಲಿ, ಅರ್ಜಿ ವಿಚಾರಣಾ ಮಾನ್ಯತೆ ಕುರಿತು ಮುಂದೆಯೂ ಪರಿಶೀಲಿಸಬಹುದು ಎಂಬ ಅಭಿಪ್ರಾಯದೊಂದಿಗೆ ಕಮಿಷನರ್ ನೇಮಕ ಮಾಡಿತ್ತು’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಪ್ರಾಚೀನ ಸ್ಮಾರಕಗಳ ಕಾಯ್ದೆ-1958ರ ಪ್ರಕಾರ 100 ವರ್ಷಕ್ಕಿಂತ ಹಳೆಯ ಕಟ್ಟಡಗಳು ಪುರಾತನ ಸ್ಮಾರಕ ಎನಿಸಿಕೊಳ್ಳಲಿದ್ದು, ಆ ಕಟ್ಟಡ
ಗಳಿಗೆ ಸಾರ್ವಜನಿಕ ಪೂಜಾಸ್ಥಳ ಕಾಯ್ದೆ ಅನ್ವಯಿಸುವುದಿಲ್ಲ’ ಎಂದು ವಿವರಿಸಿದರು. ಪ್ರತಿವಾದಿ ಮಸೀದಿಯ ಪರ ವಕೀಲರು ವಾದ ಮಂಡಿಸಬೇಕಿದ್ದು,ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.