ADVERTISEMENT

ಆರೋಪಿ ಹಿಂದೆ ಕಾಣದ ಕೈ ಶಂಕೆ: ಯು.ಟಿ.ಖಾದರ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:21 IST
Last Updated 22 ಜನವರಿ 2020, 16:21 IST

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟ ಆರೋಪಿಯಿಂದ ಈ ಕೃತ್ಯ ಮಾಡಿಸಿದವರು ಯಾರು ಎಂಬುದು ತನಿಖೆ ಆಗಬೇಕು. ಇದರ ಹಿಂದೆ ಕಾಣದ ಕೈಗಳ ಸಂಚು ಇರುವುದು ಸ್ಪಷ್ಟ ಎಂದು ಮಾಜಿ ಸಚಿವ ಯು.ಟಿ. ಖಾದರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಾಂಬ್ ಪತ್ತೆ ಆಗಿರುವುದು ಗಂಭೀರವಾದ ಪ್ರಕರಣ. ಸಮಾಜದ್ರೋಹಿ ಶಕ್ತಿಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಪ್ರಸ್ತುತ ಆತ ಮಾನಸಿಕ ಖಿನ್ನತೆ ಉಳ್ಳವನು ಎನ್ನಲಾಗುತ್ತಿದೆ. ಆದರೆ, ಆತ ಸ್ಫೋಟಕ ಇರಿಸಿ, ಅಲ್ಲಿಂದ ಸಲೀಸಾಗಿ ತಪ್ಪಿಸಿಕೊಂಡು ಬೆಂಗಳೂರಿಗೆ ತೆರಳಿ ಪೊಲೀಸರೆದುರು ಶರಣಾಗುವವರೆಗೆ ಸರಿ ಇದ್ದ. ಶರಣಾಗತಿಯ ನಂತರ ಆತನಿಗೆ ಮಾನಸಿಕ ಖಿನ್ನತೆ ಶುರುವಾಯಿತಾ? ಈ ಅನುಮಾನಗಳಿಗೆ ಸರ್ಕಾರ ಸ್ಪಷ್ಟವಾದ ಉತ್ತರ ನೀಡಬೇಕು. ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಖಂಡಿದ್ದು, ಆಡಳಿತ ಯಂತ್ರವು ಸಂಪೂರ್ಣ ಹಾಳಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆ, ಕೇಂದ್ರ ಸಚಿವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು, ಅವರು ಕೂಡಲೇ ಕ್ಷಮೆ ಯಾಚಿಸಬೇಕು. ಕೇರಳದಿಂದ ಬಂದವರು, ಇಸ್ಲಾಮಿಕ್ ಉಗ್ರ, ಸಿಎಎ ಕಾಯ್ದೆಗೆ ಪ್ರತೀಕಾರ ಎಂಬಿತ್ಯಾದಿ ಸುದ್ದಿಗಳನ್ನು ಬಿಂಬಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣದ ಆರೋಪಿ ಸಿಗದೇ ಇದ್ದರೆ ಇನ್ನು ಬೇರೆಯವರ ಹೆಸರೂ ಕೇಳಿ ಬರುತ್ತಿತ್ತು. ಸಮುದಾಯಗಳ ನಡುವೆ ಕಂದಕ, ಸಾಮರಸ್ಯ ಕದಡುವ ಹುನ್ನಾರ ನಡೆಯುವುದನ್ನು ಎಲ್ಲರೂ ಖಂಡಿಸಬೇಕು ಎಂದು ಅವರು ಹೇಳಿದರು.

ADVERTISEMENT

ಸರ್ಕಾರ ಸ್ಪಷ್ಟಪಡಿಸಲಿ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತಂತೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ಜತೆಗೆ ಗೃಹ ಹಾಗೂ ಗುಪ್ತಚರ ಇಲಾಖೆಯೂ ಅವರ ಅಧೀನದಲ್ಲಿದ್ದು ಕರ್ತವ್ಯ ನಿರ್ವಹಿಸಿದವರು. ಅವರಿಗೆ ಅವರದೇ ಆದ ಮೂಲಗಳ ಆಧಾರದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿಕೆ ಬಗ್ಗೆ ಸರ್ಕಾರ ಸ್ಪಷ್ಟವಾದ ಉತ್ತರ ನೀಡಲಿ’ ಎಂದು ಪ್ರತಿಕ್ರಿಯಿಸಿದರು.

ಪ್ರಕರಣದ ಆರೋಪಿ ಆರಾಮವಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ಫೋಟಕ ಇರಿಸಿ, ಅಲ್ಲಿಂದ ಬೆಂಗಳೂರು ತಲುಪುವವರೆಗೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಇಲಾಖೆಗಳ ವೈಫಲ್ಯವೇ ಆಗಿದೆ. ಭದ್ರತೆಗಾಗಿ ಅಷ್ಟೊಂದು ವ್ಯವಸ್ಥೆಗಳ ಹೊರತಾಗಿಯೂ, ಸಮರ್ಪಕ ಶ್ವಾನದಳದ ಹೊರತಾಗಿಯೂ ಆರೋಪಿ ಪೊಲೀಸರೆದುರು ಶರಣಾಗುವವರೆಗೆ ಆತನನ್ನು ಬಂಧಿಸಲು ಸಾಧ್ಯವಾಗದಿರುವುದು ರಾಜ್ಯ ಸರ್ಕಾರದ ಸಂಪೂರ್ಣ ನಿಷ್ಕ್ರಿಯತೆಗೆ ಸಾಕ್ಷಿ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.