
ಮಂಗಳೂರು: ಎರಡು ದಿನಗಳು ನಿರಂತರ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡವೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸರಿಗಮಪ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಿನಿಮಾ ಸಂಗೀತ ಲೋಕದ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವಾರ್ಥವಾಗಿ ಪುರಭವನದಲ್ಲಿ ಈಚೆಗೆ ಏರ್ಪಡಿಸಿದ‌್ದ ‘ಗಾತಾ ರಹೇ ಮೇರಾ ದಿಲ್’ ಕಾರ್ಯಕ್ರಮದಲ್ಲಿ ದಾಖಲೆ ಮಾಡಲಾಯಿತು.
ನ. 18ರಂದು ನಸುಕಿನ 2 ಗಂಟೆಗೆ ಡಿವೈಎಸ್‌ಪಿ ಮಹೇಶ್ ಕುಮಾರ್ ಚಾಲನೆ ನೀಡಿ ಪ್ರಾರಂಭಗೊಂಡ ಈ ಹಾಡುಗಳ ಸರಣಿ, 19ರಂದು ಸಂಜೆ 6.10ಕ್ಕೆ ಸಮಾಪ್ತಿಗೊಂಡಿತು. 130ಕ್ಕೂ ಹೆಚ್ಚು ಗಾಯಕರು ಕಿಶೋರ್ ಕುಮಾರ್ ಹಾಡುಗಳನ್ನು ಪ್ರಸ್ತುತಪಡಿಸಿದ್ದರು. ಗಾಯಕರನ್ನು ವಿವಿಧ ತಂಡಗಳಲ್ಲಿ ವಿಭಾಗಿಸಲಾಗಿತ್ತು. ಹೊಸ ಗಾಯಕರ ಜೊತೆಗೆ ಜಿಲ್ಲೆಯ ಮತ್ತು ರಾಜ್ಯದ ಹೆಸರಾಂತ ಗಾಯಕರು ಭಾಗವಹಿಸಿದ್ದರು.
ದಾಖಲೆ ಪೂರೈಸಿದ ಶೋಡಶಿ ಫೌಂಡೇಶನ್‌ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಮನೀಷ್ ಬಿಷ್ಣೋಯ್, ಶಾಸಕ ವೇದವ್ಯಾಸ ಕಾಮತ್ ಪ್ರಮಾಣಪತ್ರ ವಿತರಿಸಿದರು.
ಶೋಡಶಿ ಫೌಂಡೇಶನ್ ಅಧ್ಯಕ್ಷ ಭರತ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ಡಾ.ಶಿವರಾಮ್ ಕೆ. ಭಂಡಾರಿ, ಯಶವಂತ್ ಎಂ.ಜಿ, ಲಂಚುಲಾಲ್, ರಮೇಶ್ ಚಂದ್ರ, ಗಾಯಕರಾದ ಶ್ರೀಕಾಂತ ಕಾಮತ್, ವೇಣುಗೋಪಾಲ್ ಪುತ್ತೂರು, ರಂಜನ್ ದಾಸ್, ವಿಶ್ವಾಸ್ ಗುರುಪುರ, ಸತೀಶ್ ಇರಾ, ಡಾ.ಶಿವರಾಮ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ರಮೇಶ್ ಕೆ. ಪಾಟೀಲ್, ಅನಿಲ್ ಶೆಟ್ಟಿ ಸೂರಿಂಜೆ, ಮನೋಹರ್ ಶೆಟ್ಟಿ, ಗೋಪಾಲ ಕೃಷ್ಣ, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.