ADVERTISEMENT

936 ಪುಟಗಳ 38 ಸಾಕ್ಷ್ಯಾಧಾರ ಸಲ್ಲಿಸಿದ ಡಾ.ಹರ್ಷ

ಗೋಲಿಬಾರ್: ಕಮಿಷನರ್ ಸೇರಿ 49 ಪೊಲೀಸರಿಂದ ಸಾಕ್ಷಾಧಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:50 IST
Last Updated 13 ಮಾರ್ಚ್ 2020, 10:50 IST

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19 ರಂದು ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುತ್ತಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎದುರು ಗುರುವಾರ ಹಾಜರಾದ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ 49 ಪೊಲೀಸರು, ಸಾಕ್ಷಾಧಾರಗಳನ್ನು ಸಲ್ಲಿಸಿದರು.

ಪೊಲೀಸ್ ಆಯುಕ್ತ ಡಾ. ಹರ್ಷ ಅವರು, 21 ಪುಟಗಳ ಲಿಖಿತ ಹೇಳಿಕೆ ಹಾಗೂ 936 ಪುಟಗಳ 38 ಸಾಕ್ಷಾಧಾರಗಳನ್ನು ಸಲ್ಲಿಸಿದ್ದಾರೆ. ಪೊಲೀಸ್ ಆಯುಕ್ತರು ವಿಸ್ತೃತವಾಗಿ ಹೇಳಿಕೆ ಸಲ್ಲಿಸಿದ್ದು, ಅವರ ವಿಚಾರಣೆ ಪೂರ್ಣಗೊಂಡಿದೆ. ಡಿಸಿಪಿ ಅರುಣಾಂಗ್ಷು ಗಿರಿ ಇನ್ನಷ್ಟು ಸಾಕ್ಷಾಧಾರ ಸಲ್ಲಿಸಲು ಸಮಯಾವಕಾಶ ಕೇಳಿದ್ದರು. ಮುಂದಿನ ವಿಚಾರಣೆಯಲ್ಲಿ ಡಿಸಿಪಿ ಅವರಿಗೆ ಅವಕಾಶ ನೀಡಲಾಗುವುದು ಎಂದು ತನಿಖಾಧಿಕಾರಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಆಯುಕ್ತರ ಪರ ನೋಡಲ್ ಅಧಿಕಾರಿಯಾಗಿರುವ ಎಸಿಪಿ ಕೆ.ಯು.ಬೆಳ್ಳಿಯಪ್ಪ ಅವರಿಂದ ‘ಹಿಸ್ಟೊಪ್ಯಾಥಾಲಜಿ ವರದಿ’, ‘ಎಫ್‌ಎಸ್‌ಎಲ್ ವರದಿ’, ‘ಸಾವಿನ ಅಂತಿಮ ಕಾರಣದ ವರದಿ’ ಸಲ್ಲಿಸಲು ಬಾಕಿಯಿದೆ. ‘ಮೃತರ ಆರಂಭಿಕ ಆರೋಗ್ಯ ವರದಿ’ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ವರದಿ ಸಲ್ಲಿಸಲು ಎಸಿಪಿಯವರು ಇನ್ನಷ್ಟು ಸಮಯಾವಕಾಶ ಕೇಳಿದ್ದಾರೆ ಎಂದು ಹೇಳಿದರು.

ADVERTISEMENT

ವಿಚಾರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು, ಮೂವರು ಗೃಹರಕ್ಷಕ ದಳ ಸಿಬ್ಬಂದಿ, ಸಿವಿಲ್ ಪೊಲೀಸ್‌, ಕೆಎಸ್‌ಆರ್‌ಪಿ, ಆರ್‌ಎಸ್‌ಐ, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಸಾಕ್ಷಾಧಾರ ನೀಡಿದ್ದಾರೆ. ಇಬ್ಬರು ನಾಗರಿಕರು ವಿಚಾರಣೆಗೆ ಹಾಜರಾಗಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೊಗಳನ್ನು ನೀಡಲು ಮುಂದಾಗಿದ್ದರು, ವಿಡಿಯೊಗಳನ್ನು ಸೂಕ್ತ ಫಾರ್ಮ್ಯಾಟ್‌ನಲ್ಲಿ ಕೊಡಲು ಸೂಚಿಸಿದ್ದು, ಮುಂದಿನ ವಿಚಾರಣೆ ಸಮಯದಲ್ಲಿ ಹಾಜರುಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

19ಕ್ಕೆ ವಿಚಾರಣೆ

ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾಗರಿಕರು ಹಾಗೂ ಪೊಲೀಸರ ಸೇರಿದಂತೆ 320 ಮಂದಿ ಸಾಕ್ಷಿಗಳು ಹಾಜರಾಗಿದ್ದಾರೆ. 176 ಪೊಲೀಸರ ಪೈಕಿ ಇನ್ನು 57 ಪೊಲೀಸ್ ಸಿಬ್ಬಂದಿಯ ವಿಚಾರಣೆ ನಡೆಸುವುದು ಬಾಕಿ ಉಳಿದಿದೆ. ಗುರುವಾರ ನಡೆದ ವಿಚಾರಣೆಗೆ ಹಾಜರಾಗದವರು ಇದೇ 19ರಂದು ದಾಖಲೆ, ಸಾಕ್ಷಾಧಾರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿ.ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.