ಮಂಗಳೂರು: ಬುಧವಾರ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ನಗರದ ಹೊರವಲಯದ ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಹಲವಾರು ಉದ್ದಿಮೆಗಳು ನಷ್ಟ ಅನುಭವಿಸಿವೆ.
ಬುಧವಾರ ಸಂಜೆ ಮಳೆಯ ಅಬ್ಬರ ಜೋರಾದ ಪರಿಣಾಮ ಕೈಗಾರಿಕಾ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತ್ತು. ಕೆಲಸ ಮುಗಿಸಿ ಮನೆಗೆ ತೆರಳುವವರು ಹೊಳೆಯಂತಾಗಿದ್ದ ರಸ್ತೆಯಲ್ಲಿ ಪ್ರಯಾಸದಿಂದ ಸಾಗಿದರು. ತಗ್ಗು ಪ್ರದೇಶದಲ್ಲಿರುವ ಉದ್ದಿಮೆಗಳು ತೀವ್ರ ಸಂಕಷ್ಟ ಅನುಭವಿಸಿದವು.
‘ಕೈಗಾರಿಕೆಗಳು ಸರ್ಕಾರಕ್ಕೆ ಆದಾಯವನ್ನು ತಂದು ಕೊಡುತ್ತವೆ. ನಿಯಮದ ಪ್ರಕಾರ ಎಲ್ಲ ತೆರಿಗೆಗಳನ್ನು ನಾವು ಸಕಾಲದಲ್ಲಿ ಪಾವತಿಸುತ್ತೇವೆ. ಆದರೆ, ಕೈಗಾರಿಕಾ ಪ್ರದೇಶವು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ನೆರೆ ಬಂದಾಗ ಉದ್ಯಮಗಳಿಗೆ ನಷ್ಟವಾಗುತ್ತದೆ. ಈ ವರ್ಷ ಮಳೆಗಾಲ ಪೂರ್ವ ಸಿದ್ಧತೆ ಸಮರ್ಪಕವಾಗಿ ನಡೆಸದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ’ ಎಂದು ಉದ್ಯಮಿಯೊಬ್ಬರು ಹೇಳಿದರು.
‘ಮಳೆಗಾಲ ಪೂರ್ವದಲ್ಲಿ ದೊಡ್ಡ ಕಾಲುವೆಗಳ ಹೂಳೆತ್ತುವ ಕೆಲಸ ನಡೆದಿಲ್ಲ. ಈ ಭಾಗದಲ್ಲಿರುವ ಚರಂಡಿ ಹೂಳೆತ್ತಿ ಮುಂಗಾರು ಪೂರ್ವ ಸಿದ್ಧತೆಗೆ ಕನಿಷ್ಠ ಒಂದು ತಿಂಗಳು ಬೇಕು. ಈ ಬಾರಿ ಒಂದು ವಾರವಷ್ಟೇ ಇಲ್ಲಿ ಕೆಲಸ ನಡೆದಿದೆ. ಚರಂಡಿಯಲ್ಲಿ ಹೂಳು, ಕಸ ತುಂಬಿಕೊಂಡ ಪರಿಣಾಮ ಮಳೆನೀರು ಸರಾಗವಾಗಿ ಹರಿಯದೆ, ನೆರೆ ಸೃಷ್ಟಿಯಾಗುತ್ತದೆ’ ಎಂದು ಅಲ್ಲಿನ ನೌಕರರೊಬ್ಬರು ಹೇಳುತ್ತಾರೆ.
‘ಕೈಗಾರಿಕಾ ವಲಯಕ್ಕೆ ಹೊರ ರಾಜ್ಯಗಳ ವಾಹನಗಳು ಬರುತ್ತವೆ. ವಾಹನಗಳ ಚಾಲಕರು, ನಿರ್ವಾಹಕರು ತಿಂದು ಎಸೆವ ವಸ್ತುಗಳನ್ನು, ಅಡುಗೆ ಮಾಡಿ ಮಿಕ್ಕಿದ ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಾರೆ. ಇದರಿಂದಾಗಿ ಚರಂಡಿಯಲ್ಲಿ ಕಸಗಳು ತುಂಬಿರುತ್ತವೆ. 2023–24ರಲ್ಲಿ ಕೆನರಾ ಕೈಗಾರಿಕಾ ಸಂಘವೇ ಮುಂದಾಗಿ ಉದ್ಯಮಿಗಳಿಂದ ಸಂಗ್ರಹಿಸಿದ ₹15 ಲಕ್ಷ ಮೊತ್ತದಲ್ಲಿ ಅಗತ್ಯ ಕಾಮಗಾರಿ ನಡೆಸಿತ್ತು. ಈ ಬಾರಿ ಕಾಲುವೆ ಸ್ವಚ್ಛಗೊಳಿಸುವ ದೊಡ್ಡ ಹಿಟಾಚಿ ಈ ಭಾಗಕ್ಕೆ ಪ್ರವೇಶವನ್ನೇ ಮಾಡಲಿಲ್ಲ’ ಎಂದು ಸಂಘದ ಪದಾಧಿಕಾರಿಯೊಬ್ಬರು ಬೇಸರಿಸಿದರು.
ರಸ್ತೆ ಸಂಪೂರ್ಣ ಹಾಳಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ವಾಹನ ಚಲಾಯಿಸುವುದೇ ಹರಸಾಹಸವಾಗಿದೆ ಎಂದು ನೌಕರ ಜಗದೀಶ್ ಬೇಸರಿಸಿದರು.
ಸರ್ಕಾರಕ್ಕೆ ಆದಾಯ ತಂದುಕೊಡುವ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬೈಕಂಪಾಡಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು.– ಅರುಣ್ ಪಡಿಯಾರ್, ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ
‘ಒಂದು ವಾರದ ಕೆಲಸಕ್ಕೆ ಹಿನ್ನಡೆ’
‘ಆಟೊಮೊಬೈಲ್ ಫ್ಯಾಬ್ರಿಕೇಷನ್ ಗೋದಾಮುಗಳು ಅಡಿಕೆ ಸಂಸ್ಕರಣಾ ಘಟಕಗಳು ತೈಲ ಪ್ಯಾಕಿಂಗ್ ಘಟಕ ಮುದ್ರಣಾಲಯ ಪ್ಲೈವುಡ್ ಇಂಡಸ್ಟ್ರಿ ಸೇರಿದಂತೆ ಹಲವಾರು ಉದ್ದಿಮೆಗಳು ಇಲ್ಲಿವೆ. 20ಕ್ಕೂ ಹೆಚ್ಚು ಉದ್ದಿಮೆಗಳ ಕಟ್ಟಡಗಳಿಗೆ ಮಳೆನೀರು ನುಗ್ಗಿದೆ. ಒಮ್ಮೆ ನೀರು ನುಗ್ಗಿದರೆ ಒಂದು ವಾರದ ಕೆಲಸಕ್ಕೆ ಹಿನ್ನಡೆಯಾಗುತ್ತದೆ’ ಎನ್ನುತ್ತಾರೆ ಕೆನರಾ ಕೈಗಾರಿಕಾ ಸಂಘದ ಖಜಾಂಚಿ ರಾಮಚಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.