ADVERTISEMENT

ಮಂಗಳೂರು ಮಹಾನಗರ ಪಾಲಿಕೆ, 2023-24 ನೇ ಸಾಲಿನ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 7:18 IST
Last Updated 9 ಮಾರ್ಚ್ 2023, 7:18 IST
   

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ ಅವರು 2023-24 ನೇ ಸಾಲಿನ ಬಜೆಟ್ ಅನ್ನು ಗುರುವಾರ ಮಂಡಿಸಿದರು.


ಪಾಲಿಕೆ ₹ 776.41ಕೋಟಿ ವರಮಾನ ನಿರೀಕ್ಷಿಸಿ, ₹921.57 ವೆಚ್ಚ ಮಾಡಲು ಮುಂದಾಗಿದೆ. ಹಿಂದಿನ ವರ್ಷದ ₹ 365.24 ಕೋಟಿ ಉಳಿದಿದ್ದು, 2023-24ರಲ್ಲಿ ₹ 222.04 ಮಿಗತೆ ಆಗಲಿದೆ ಬಜೆಟ್ ನಲ್ಲಿ ಹೇಳಲಾಗಿದೆ.


2022-23ನೇ ಸಾಲಿನಲ್ಲಿ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಜಾಗದ ಮಾರ್ಗದರ್ಶಿ ಮೌಲ್ಯದ ಆಧಾರದಲ್ಲಿ ಲೆಕ್ಕಾಚಾರ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ತೆರಿಗೆ ಲೆಕ್ಕಾಚಾರದ ವ್ಯವಸ್ಥೆಯನ್ನು ಮರು ಪರಿಷ್ಕರಣೆ ಮಾಡುವುದಾಗಿ ಮೇಯರ್ ಜಯಾನಂದ ಅಂಚನ್ ಅವರು ಪಾಲಿಕೆಯ ಹಿಂದಿನ ಸಭೆಯಲ್ಲಿ ಭರವಸೆ ನೀಡಿದ್ಸರು. ಆದರೆ, ಬಜೆಟ್ ನಲ್ಲಿ ಈ ಕುರಿತ ಯಾವುದೇ ಉಲ್ಲೇಖ ಇಲ್ಲ.

ADVERTISEMENT


ನಾಗರಿಕರ ಕಲ್ಯಾಣಕ್ಕಾಗಿ 12 ವಿಶೇಷ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ..ಮಳೆನೀರು ಸಂಗ್ರಹಕ್ಕೆ ₹ 25 ಲಕ್ಷ, ಮಹಿಳಾ ಸ್ವಾವಲಂಬಿ ಯೋಜನೆಗೆ ₹5 ಲಕ್ಷ, ವಿದ್ಯಾರ್ಥಿ ಜ್ಞಾನಸಿರಿ ಯೋಜನೆಗೆ ₹5 ಲಕ್ಷ ಕಾಯ್ದಿರಿಸಲಾಗಿದೆ. ಸೇವೆಯಲ್ಲಿರುವಾಗಲೇ ವೀರಮರಣವನ್ನಪ್ಪುವ ಯೋಧರ ಕುಟುಂಬದ ಕಲ್ಯಾಣಕ್ಕಾಗಿ 'ನಮ್ಮ ಯೋಧ' ಕಾರ್ಯಕ್ರಮ ವನ್ನು ಆರಂಭಿಸಲಾಗಿದ್ದು ಅದಕ್ಕೆ ₹5 ಲಕ್ಷ ಮೀಸಲಿಡಲಾಗಿದೆ. ಪಾಲಿಕೆ ಸಿಬ್ಬಂದಿಗಾಗಿ ಆರೋಗ್ಯ ಸಿರಿ ಕಾರ್ಯಕ್ರಮ ಆರಂಭಿಸಲಾಗಿದ್ದು ಅದಕ್ಕಾಗಿ ₹ 35 ಲಕ್ಷ ನಿಗದಿಪಡಿಸಲಾಗಿದೆ.

ತುಳುಭಾಷೆ ಅಭಿವೃದ್ಧಿಗೆ ತೌಳವ ಕಾರ್ಯಕ್ರಮ ಆರಂಭಿಸಲು ₹10 ಲಕ್ಷ ತೆಗೆದಿರಿಸಲಾಗಿದೆ. ವಿಜ್ಞಾನಿ/ಸುಜ್ಞಾನಿ ಯೋಜನೆ ಆರಂಭಿಸಿದ್ದು, ಅದಕ್ಕೆ ₹5 ಲಕ್ಷ, ಬೀದಿ ನಾಯಿಗಳ ಹಾಗೂ ಅನಾಥ ಪ್ರಣಿಗಳಿಗಾಗಿ ರಕ್ಷಕ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಅದಕ್ಕೆ ₹25 ಲಕ್ಷ. ಮೀಸಲಿಡಲಾಗಿದೆ. ಹಸಿರು ಮಂಗಳೂರು ಕಾರ್ಯಕ್ರಮದಡಿ ವಾರ್ಡಿಗೊಂದು ಉದ್ಯಾನ ನಿರ್ಮಿಸಲು ₹60 ಲಕ್ಷ ಅನುದಾನ ತೆಗೆದಿಡಲಾಗಿದೆ.

ಬಿಬಿಎಂಪಿ ಮಾದರಿಯಲ್ಲಿ ಮಂಗಳೂರು ನಗರದಲ್ಲೂ 'ಮಂಗಳೂರು ಶ್ರೀಲಕ್ಷ್ಮೀ ಯೋಜನೆ ಆರಂಭಿಲು ಬಜೆಟ್‌ನಲ್ಲಿ ₹25 ಲಕ್ಷ ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚೊಚ್ಚಲ ಹಾಗೂ ಎರಡನೇ ಹೆರಿಗೆವಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುವ ಬಿಪಿಎಲ್ ಕುಟುಂಬದ ಮಹಿಳೆಯರು ಆ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿ ಇಡುವ ಈ ಸೌಲಭ್ಯ ಪಡೆಯಲು ಅರ್ಹರು.


ಸ್ವಚ್ಛ ಮಂಗಳೂರು ಕಾರ್ಯಕ್ರಮದ ಜಾಗೃತಿ ಮೂಡಿಸಲು ₹5 ಲಕ್ಷ ಮೀಸಲಿಡಲಾಗಿದೆ. ಕೊಳೆಗೇರಿ ಅಭಿವೃದ್ಧಿ ಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ₹ 1 ಕೋಟಿ ಅನುದಾನ ಪಡೆಯುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.


ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ₹ 148 ಕೋಟಿ , ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆ ಗೆ ₹ 35 ಲಕ್ಷ, ರಾಜಕಾಲುವೆಗಳ ಸಮಗ್ರ ನಿರ್ವಹಣೆಗೆ ₹5 ಕೋಟಿ, ನೀರು ಸರಬರಾಜಿಗೆ ₹32.57 ಕೋಟಿ, ಒಳಚರಂಡಿ ಮಾರ್ಗಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹21.65 ಕೋಟಿ ಕಾಯ್ದಿರಿಸಲಾಗಿದೆ.


ಪಾಲಿಕೆಯಲ್ಲಿ ಕಾಗದ ರಹಿತ ಕಚೇರಿ ಕಾರ್ಯಕ್ರಮವನ್ನು ಸಮಗ್ರವಾಗಿ ಅನುಷ್ಠಾನ ಮಾಡುವ ಹಾಗೂ ಎಲ್ಲ ಅರ್ಜಿಗಳನ್ನು ಆನ್‌ಲೈನ್ ನಲ್ಲು ಸಲ್ಲಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವ ಭರವಸೆ ನೀಡಲಾಗಿದೆ.
ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ ಹಾಗೂ ಪಾಲಿಕೆ ಅಯುಕ್ತ ಚನ್ನಬಸಪ್ಪ ಕೆ. ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.