ಮಂಗಳೂರು: ಜಿಲ್ಲೆಯಲ್ಲಿ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಹಾಕುತ್ತಿರುವ ನೇರ ಪರಿಣಾಮ ನಾಟಕ ತಂಡಗಳ ಮೇಲೆ ಆಗುತ್ತಿದ್ದು, ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದೆ ತೀವ್ರ ತೊಂದರೆಯಾಗಿದ್ದು, ಸಮಯಮಿತಿಗೆ ವಿನಾಯಿತಿ ನೀಡಬೇಕು ಎಂದು ತುಳುನಾಟಕ ಕಲಾವಿದರ ಒಕ್ಕೂಟದವರು ಒತ್ತಾಯಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳುನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಕುಮಾರ್ ಮಲ್ಲೂರ್, ‘ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಕೆಗೆ ಮಿತಿ ಹೇರಿರುವ ಜೊತೆಗೆ, ರಾತ್ರಿ 10 ಗಂಟೆಗೆ ಕಾರ್ಯಕ್ರಮ ಮುಗಿಸಬೇಕು ಎಂಬ ಜಿಲ್ಲಾಳಿತದ ಆದೇಶದಿಂದ ಕಲಾವಿದರು ಕಂಗೆಟ್ಟಿದ್ದಾರೆ. ಧ್ವನಿವರ್ಧಕ ಒದಗಿಸುವವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.
ಈಗಾಗಲೇ ಹಲವರಿಗೆ ನೋಟಿಸ್ ಬಂದಿದ್ದು, ಧ್ವನಿವರ್ಧಕ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಟಕ ತಂಡಗಳು ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿವೆ. ಕರಾವಳಿ ಜಿಲ್ಲೆಗಳಲ್ಲಿ 75ಕ್ಕೂ ಹೆಚ್ಚು ನಾಟಕ ತಂಡಗಳಿದ್ದು, 3,000ಕ್ಕೂ ಅಧಿಕ ಕಲಾವಿದರು, ತಂತ್ರಜ್ಞರು, ಸಂಗೀತಗಾರರು, ಪ್ರಸಾದನ, ವೇಷಭೂಷಣ, ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವವರಿದ್ದಾರೆ ಎಂದು ಹೇಳಿದರು.
ಗಣೇಶ ಹಬ್ಬದಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗೆ ನಿರಂತರ ನಾಟಕ ಪ್ರದರ್ಶನಗಳು ನಡೆಯುತ್ತಿರುತ್ತವೆ. ನಾಟಕಗಳು ಪ್ರೇಕ್ಷಕರನ್ನು ತಲುಪಲು ಧ್ವನಿವರ್ಧಕಗಳು ಅಗತ್ಯ. ರಾತ್ರಿ 10.30ಕ್ಕೆ ಕಾರ್ಯಕ್ರಮ ಮುಗಿಸಲು ಸಾಧ್ಯವಾಗದು. ತುಳುನಾಡಿನಲ್ಲಿ ನೇಮ, ಕೋಲ, ಯಕ್ಷಗಾನ, ನಡೆಯುವುದೇ ಸಂಜೆ ಕತ್ತಲು ಕವಿದ ಮೇಲೆ. ಹೀಗಾಗಿ ಸಮಯ ಮಿತಿ ಮತ್ತು ಶಬ್ದ ಮಿತಿ ಹೇರುವುದು ಸರಿಯಲ್ಲ ಎಂದರು.
ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಬೇರೆ ಯಾವ ಜಿಲ್ಲೆಗಳಲ್ಲಿ ಇಲ್ಲದ ನಿಯಮ ಇಲ್ಲಿ ಮಾತ್ರ ಯಾಕೆ? ಶುಕ್ರವಾರ ನಡೆಯುತ್ತಿದ್ದ ಒಂದು ನಾಟಕವನ್ನು ನಿಲ್ಲಿಸಿದ್ದಾರೆ. ಇಲ್ಲಿನ ಸಂಸ್ಕೃತಿ, ಸಂಪ್ರದಾಯ ಉಳಿಸಲು ನಿಯಮದಲ್ಲಿ ಸಡಿಲಿಕೆ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.
ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ‘ನನ್ನ ರಂಗಭೂಮಿಯ ಅನುಭವದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ಕಲಾವಿದರ ಈ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು’ ಎಂದರು.
ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಅಧ್ಯಕ್ಷ ಲಂಚುಲಾಲ್, ತುಳು ನಾಟಕ ಕಲಾವಿದರ ಒಕ್ಕೂಟ ಉಪಾಧ್ಯಕ್ಷ ಗೋಕುಲ್ ಕದ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.