ADVERTISEMENT

ಬೀದಿ ಬದಿ ವ್ಯಾಪಾರಸ್ಥರು ಸಂಘಟಿತರಾಗಿ

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ 6ನೇ ಸಮ್ಮೇಳನದಲ್ಲಿ ಸಿಐಟಿಯು ಮುಖಂಡ ಬಿ.ಎಂ.ಭಟ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:19 IST
Last Updated 6 ಆಗಸ್ಟ್ 2025, 4:19 IST
ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶದಲ್ಲಿ ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಮಾತನಾಡಿದರು
ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶದಲ್ಲಿ ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಮಾತನಾಡಿದರು   

ಮಂಗಳೂರು: ‘ಯಾರಿಗೂ ಮೋಸ ಮಾಡದೆ ಪ್ರಾಮಾಣಿಕವಾಗಿ ಬದುಕಬೇಕು ಎನ್ನುವವರು ಬೀದಿ ಬದಿ ವ್ಯಾಪಾರ ನಡೆಸುತ್ತಾರೆ. ಬೀದಿ ಬದಿ ವ್ಯಾಪಾರಿಗಳ ಒಗ್ಗಟ್ಟು ಮುರಿಯಲು ಪ್ರಯತ್ನಗಳಾಗುತ್ತಿದ್ದು, ಅದಕ್ಕಾಗಿ ಶಕ್ತಿ ಪ್ರದರ್ಶನಕ್ಕೆ ಸಂಘಟಿತರಾಗಬೇಕು’ ಎಂದು ವಕೀಲ, ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಭಟ್‌ ಹೇಳಿದರು.

ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ, ಸಿಐಟಿಯು ವತಿಯಿಂದ ನಗರದ ಪೊಲೀಸ್‌ ಲೇನ್‌ನ ನಾಸಿಕ್‌ ಬಂಗೇರ ಭವನದಲ್ಲಿ ಮಂಗಳವಾರ ನಡೆದ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ 6ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಿಯತ್ತಿನಿಂದ ವ್ಯವಹಾರ ಮಾಡುವ ಬೀದಿ ಬದಿ ವ್ಯಾಪಾರಸ್ಥರಿಂದಾಗಿ ಮೋಸ ಮಾಡುವವರಿಗೆ, ಬಂಡವಾಳಶಾಹಿಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘದಿಂದ ಸಂಘಟನಾತ್ಮಕ ಮತ್ತು ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯಬೇಕು. ಬೀದಿ ಬದಿ ವ್ಯಾಪಾರಸ್ಥರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದ್ದು, ಸಂಘಟಿತರಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ADVERTISEMENT

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಮಾತನಾಡಿ, ದೇಶದಲ್ಲಿ 2ರಿಂದ 3 ಕೋಟಿ ಬೀದಿ ಬದಿ ವ್ಯಾಪಾರಸ್ಥರಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರ ಅವರಿಗೆ ಒಂದು ಕೈಯಿಂದ ಸವಲತ್ತು ನೀಡಿ ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಮೂಲಕ ಮೋಸ ಮಾಡಲಾಗುತ್ತಿದೆ. ಅವರಿಗೆ ಸಾಮಾಜಿಕ ಭದ್ರತೆ, ವಿವಿಧ ಸವಲತ್ತುಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಸಾಲ ಯೋಜನೆ ಮುಂದುವರಿಸಬೇಕು, ಅವರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು, ವೈದ್ಯಕೀಯ ಮತ್ತು ಮರಣ ಪರಿಹಾರ ಒದಗಿಸಬೇಕು, ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.

ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಇಮ್ತಿಯಾಜ್‌ ಮಾತನಾಡಿದರು. ಅಧ್ಯಕ್ಷ ಮುಜಾಫರ್‌, ಪ್ರಧಾನ ಕಾರ್ಯದರ್ಶಿ ಸಂತೋಷ್‌, ಮುಖಂಡರಾದ ಯೋಗೀಶ್‌ ಕೊಂಚಾಡಿ, ರಿಜ್ವಾನ್‌, ಹಸನ್‌ ಕುದ್ರೋಳಿ, ಶಿವಪ್ಪ, ಖಾದರ್‌, ಮೇಬಲ್‌ ಡಿಸೋಜ, ಚಂದ್ರ ಪಡೀಲ್, ಶರ್ಪುದ್ದೀನ್‌ ಹಂಪನಕಟ್ಟೆ, ವಿನಾಯಕ ಶೆಣೈ ಉಳ್ಳಾಲ, ಖಲಂದರ್‌, ಗಂಗಮ್ಮ, ಮನ್ಸೂರ್‌, ಮೊಯಿದೀನ್‌ ಬೈಕಂಪಾಡಿ, ಶಿವಾನಂದ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.