ADVERTISEMENT

ಮಂಗಳೂರು | ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ: ಆರ್‌ಟಿಒ ಕಚೇರಿಯ ಮೂವರ ಅಮಾನತು

ಕಾರಿನ ಮೌಲ್ಯ ಕಡಿಮೆ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 13:42 IST
Last Updated 27 ಜೂನ್ 2025, 13:42 IST
<div class="paragraphs"><p>ಅಮಾನತು</p></div>

ಅಮಾನತು

   

ಮಂಗಳೂರು: ಕಾರಿನ ತಾತ್ಕಾಲಿಕ ನೋಂದಣಿಯ ವಿವರ ಮಾರ್ಪಾಡು ಮಾಡುವ ಜೊತೆಗೆ ಅದರ ಮೌಲ್ಯ ಕಡಿಮೆ ನಮೂದಿಸಿ ಕಡಿಮೆ ತೆರಿಗೆ ಆಕರಿಸುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪದ ಮೇರೆಗೆ ಇಲ್ಲಿಯ ಉಪ ಸಾರಿಗೆ ಆಯುಕ್ತರ ಕಚೇರಿಯ ಮೂವರನ್ನು ಅಮಾನತುಗೊಳಿಸಲಾಗಿದೆ.

ಮಂಗಳೂರು ಉಪ ಸಾರಿಗೆ ಆಯುಕ್ತರ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ, ಅಧೀಕ್ಷಕಿ ರೇಖಾ ನಾಯಕ್‌, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ.ಎಚ್‌. ಅಮಾನತುಗೊಂಡವರು.

ADVERTISEMENT

ಮರ್ಸಿಡಿಸ್ ಬೆನ್ಜ್ ಕಾರಿಗೆ ಸಂಬಂಧಿಸಿದಂತೆ 01.01.2017ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಎಲೆಕ್ಟ್ರಾನಿಕ್‌ ಸಿಟಿ ಕಚೇರಿಯಿಂದ ಮಂಗಳೂರು ಕಚೇರಿಗೆ ತಾತ್ಕಾಲಿಕ ನೋಂದಣಿ ಪತ್ರವನ್ನು ನಿಹಾಲ್‌ ಅಹಮದ್‌ ಹೆಸರಿನಲ್ಲಿ₹1,96,95,000ಕ್ಕೆ ಇನ್‌ವಾಯಿಸ್‌ ನೀಡಲಾಗಿದೆ. ಈ ತಾತ್ಕಾಲಿಕ ನೋಂದಣಿಯ ವಿವರಗಳನ್ನು 24.12.2024ರಂದು ಮಂಗಳೂರು ಕಚೇರಿಯಲ್ಲಿ ಮಾರ್ಪಾಡುಗೊಳಿಸಿ, ಈ ಕಾರಿನ ಮಾರಾಟ ಮೊತ್ತ ₹32,15,000 ಎಂದು ನಮೂದಿಸಲಾಗಿದೆ. ಈ ಅಕ್ರಮವೆಸಗಿದ ಕಾರಣಕ್ಕಾಗಿ ಈ ಮೂವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್‌ ಎ.ಎಂ. ಅವರು ಹೊರಡಿಸಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಅಮಾನತು ಅವಧಿಯ ನಂತರ ನೀಲಪ್ಪ ಕೆ.ಎಚ್‌. ಅವರ ಹುದ್ದೆಯ ಲೀನ್‌ಅನ್ನು ಶಿವಮೊಗ್ಗ, ರೇಖಾ ನಾಯಕ್‌ ಅವರ ಹುದ್ದೆಯ ಲೀನ್‌ ಅನ್ನು ಚಿಕ್ಕಮಗಳೂರು, ಸರಸ್ವತಿ ಅವರ ಹುದ್ದೆಯ ಲೀನ್‌ ಅನ್ನು ಬೆಂಗಳೂರು (ಉತ್ತರ) ಕಚೇರಿಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರಿನ ಹೆಚ್ಚುವರಿ ಸಾರಿಗೆ ಆಯುಕ್ತರು (ಆಡಳಿತ) ಮಂಗಳೂರು ಕಚೇರಿಗೆ ಭೇಟಿ ನೀಡಿ ವಾಹನ ಸಂಖ್ಯೆ ಕೆಎ20 ಎಂಎಚ್‌0888ಕ್ಕೆ ಸಂಬಂಧಿಸಿದ ತಾತ್ಕಾಲಿಕ ನೋಂದಣಿಯ ವಿವರವನ್ನು ಮಾರ್ಪಾಡು ಮಾಡಿದ್ದನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದರು. ಅದರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.