ADVERTISEMENT

ಮಂಗಳೂರು ವಿ.ವಿ: ಫಲಿತಾಂಶ ಇಂದು

ವಿದ್ಯಾರ್ಥಿಗಳಿಗೆ ದೀಪಾವಳಿಯಲ್ಲೇ ಫಲಿತಾಂಶದ ಬೆಳಕು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 16:41 IST
Last Updated 14 ನವೆಂಬರ್ 2020, 16:41 IST
ಪ್ರೊ.ಪಿ.ಎಸ್‌. ಯಡಪಡಿತ್ತಾಯ
ಪ್ರೊ.ಪಿ.ಎಸ್‌. ಯಡಪಡಿತ್ತಾಯ   

ಮಂಗಳೂರು: ಮಂಗಳೂರು ವಿಶ್ವವಿ ದ್ಯಾಲಯದ 2019–20ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರದ ಅಂತಿಮ ಸೆಮಿಸ್ಟರ್‌ಗಳ ಫಲಿತಾಂಶವು ಭಾನುವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಸುಮಾರು 48 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2.5 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಟ್ಯಾಬ್ಯುಲೇಷನ್ ಈಗಾಗಲೇ ಮುಗಿದಿದೆ. ಫಲಿತಾಂಶವನ್ನು ಕಂಪ್ಯೂಟರ್‌ಗೆ ಅ‍ಪ್‌ಡೇಟ್ ಮಾಡುವ ಪ್ರಕ್ರಿಯೆಯು ಶನಿವಾರ ಅಂತಿಮ ಹಂತಕ್ಕೆ ತಲುಪಿದ್ದು, ಭಾನುವಾರ ದೀಪಾವಳಿ ಸಂಭ್ರಮದ ನಡುವೆಯೇ ಫಲಿತಾಂಶ ನಿರೀಕ್ಷಿಸಲಾಗಿದೆ.

‘ನಾವು ದೀಪಾವಳಿ ಪೂರ್ವದಲ್ಲೇ ಫಲಿತಾಂಶ ನೀಡಲು ಸಿದ್ಧತೆ ನಡೆಸಿದ್ದೆವು. ಆದರೆ, ಕೆಲವು ಸಣ್ಣಪುಟ್ಟ ತಾಂತ್ರಿಕ ಹೊಂದಾಣಿಕೆಗಳ ಕಾರಣ ಶನಿವಾರ ಮತ್ತೊಮ್ಮೆ ಮರು ಪರಿಶೀಲಿಸಲಾಯಿತು. ಭಾನುವಾರ ಸಂಜೆಯ ವೇಳೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೋವಿಡ್–19 ಕಾರಣ ಸರ್ಕಾರ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ನಿರ್ದೇಶನದ ಅನುಸಾರ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಸೆಪ್ಟೆಂಬರ್‌ 16ರಿಂದ 30ರವರೆಗೆ ನಡೆದಿತ್ತು. ಅಕ್ಟೋಬರ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಆರಂಭಗೊಂಡಿದ್ದು, ನವೆಂಬರ್ ಮೊದಲ ವಾರ ತನಕ ಸಾಗಿತ್ತು. ‘ಪರೀಕ್ಷೆಯಿಂದ ಹಿಡಿದು ಮೌಲ್ಯಮಾಪನ ತನಕ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಕುಲಪತಿಗಳ ಒಪ್ಪಿಗೆಯೊಂದಿಗೆ ಫಲಿತಾಂಶವನ್ನೂ ಶೀಘ್ರ ಪ್ರಕಟಿಸಲಾಗುವುದು’ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಧರ್ಮ ದೃಢಪಡಿಸಿದ್ದಾರೆ.ಈ ನಡುವೆ 2019-20ನೇ ಸಾಲಿನ ಪದವಿ ಮಟ್ಟದ ಇಂಟರ್‌ ಮೀಡಿಯೆಟ್‌ ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾಲಯವು ತನ್ನ ವೆಬ್‍ಸೈಟ್‍ನಲ್ಲಿ (www.mangalore university.ac.in) ಅಕ್ಟೋಬರ್‌ ಮೊದಲ ವಾರದಲ್ಲೇ ಪ್ರಕಟಿಸಿದೆ. ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ನವೆಂಬರ್ 17ರಿಂದ ಪದವಿ ತರಗತಿಗಳು ಆರಂಭಗೊಳ್ಳಲಿವೆ. ಹೊಸ ಪ್ರವೇಶಾತಿ ಪ್ರಕ್ರಿಯೆಯು ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.