ADVERTISEMENT

ಪರೀಕ್ಷಾ ಫಲಿತಾಂಶ ವಿಳಂಬ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 13:01 IST
Last Updated 20 ಡಿಸೆಂಬರ್ 2022, 13:01 IST
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ಆವರಣದೊಳಗೆ ಪ್ರತಿಭಟನಕಾರರು ಬ್ಯಾರಿಕೇಡ್‌ ತಳ್ಳಿ ನುಗ್ಗುತ್ತಿರುವುದು
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ಆವರಣದೊಳಗೆ ಪ್ರತಿಭಟನಕಾರರು ಬ್ಯಾರಿಕೇಡ್‌ ತಳ್ಳಿ ನುಗ್ಗುತ್ತಿರುವುದು   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶ ವಿಳಂಬ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ವಿವಿಯ ಸಿಂಡಿಕೇಟ್‌ ಸಭೆ ನಡೆಯುತ್ತಿದ್ದ ವೇಳೆಯೇ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಆಡಳಿತ ಸೌಧ ಆವರಣಕ್ಕೆ ಬಂದ ಪ್ರತಿಭಟನಕಾರರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ತಳ್ಳಿ ಆಡಳಿತ ಸೌಧದೊಳಗೆ ನುಗ್ಗಿದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನೂಕಾಟ, ತಳ್ಳಾಟವೂ ನಡೆಯಿತು.

ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ. ಹಾಗೂ ಪ್ರೊ.ಪಿ.ಎಲ್ ಧರ್ಮ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

ADVERTISEMENT

ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯ್ಲ ಮಾತನಾಡಿ, ‘ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಪರೀಕ್ಷಾ ಅಂಕಪಟ್ಟಿ ನೀಡದೆ ಸತಾಯಿಸಲಾಗುತ್ತಿದೆ. ಅಂಕಪಟ್ಟಿ ಬಾರದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಆಗುತ್ತಿಲ್ಲ. ಇದಕ್ಕೆ ಪರೀಕ್ಷಾ ಪತ್ರಿಕೆಯ ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದಿರುವುದು ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎನ್‌ಇಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ನ ಫಲಿತಾಂಶವನ್ನು ಈವರೆಗೂ ನೀಡಿಲ್ಲ. ಎಲ್ಲ ಸಮಸ್ಯೆಗಳಿಗೆ ಮಂಗಳೂರು ವಿವಿಯ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರು ಕಾರಣ’ ಎಂದು ಆರೋಪಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಪ್ರತಿಕ್ರಿಯಿಸಿ, ‘ವಿದ್ಯಾರ್ಥಿಗಳು ವಾಸ್ತವ ಸ್ಥಿತಿ ಅರ್ಥಮಾಡಿಕೊಂಡಿಲ್ಲ. ಒಂದು ದಿನವೂ ರಜೆ ಹಾಕದೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯುಸಿಎಂಎಸ್‌ನದ್ದೇ ನಮಗೆ ಸಮಸ್ಯೆ ಆಗಿರೋದು. ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದಷ್ಟು ಬೇಗ ಫಲಿತಾಂಶ ಪ್ರಕಟಣೆಗೆ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಪರೀಕ್ಷಾಂಗ ಸಚಿವರು ರಾಜೀನಾಮೆ ನೀಡಬೇಕು’ ಎಂಬ ಪ್ರತಿಭಟನಕಾರರ ಆಗ್ರಹಕ್ಕೆ ಉತ್ತರಿಸಿದ ಅವರು, ‘ನಾನು ರಾಜೀನಾಮೆ ನೀಡುವುದರಿಂದ ಈಗಿರುವ ಸಮಸ್ಯೆಗೆ ಪರಿಹಾರ ಸಿಗುವುದಿದ್ದರೆ ರಾಜೀನಾಮೆ ಪತ್ರ ಬರೆದು ಸಿದ್ಧನಾಗಿಯೇ ಬಂದಿದ್ದೇನೆ’ ಎಂದರು.

ಬಳಿಕ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರು ಡಿ.25ರೊಳಗೆ ಮೊದಲ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ ಮಾಡುತ್ತೇವೆ ಹಾಗೂ ದ್ವಿತೀಯ ಸೆಮಿಸ್ಟರ್‌ನ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ಜನವರಿ 20ರೊಳಗೆ ಪ್ರಕಟ ಮಾಡುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಕುಲಗೇರಿ, ತಾಲ್ಲೂಕು ಸಂಚಾಲಕ ಆದರ್ಶ್ ಉಪ್ಪಾರ, ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.