ADVERTISEMENT

ಮಂಗಳೂರು ವಿ.ವಿ ಘಟಿಕೋತ್ಸವ: 80 ವರ್ಷದ ಪ್ರಭಾಕರ್‌ಗೆ ಪಿಎಚ್‌.ಡಿ ಪದವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 15:30 IST
Last Updated 15 ಮಾರ್ಚ್ 2023, 15:30 IST
ಕೆ‌.ಪ್ರಭಾಕರ್ ಅವರು ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ವಸ್ತು ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದರು. ಕುಲಸಚಿವ (ಪರೀಕ್ಷಾಂಗ) ಪ್ರೊ.ರಾಜು ಕೃಷ್ಣ ಚಲಣ್ಣವರ, ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ, ನ್ಯಾಕ್‌ ನಿರ್ದೇಶಕ ಪ್ರೊ.ಎಸ‌್.ಸಿ.ಶರ್ಮ, ಕುಲಸಚಿವ ಪ್ರೊ.ಕಿಶೋರ್‌ ಕುಮಾರ್‌ ಸಿ.ಕೆ. ಇದ್ದಾರೆ– ಪ್ರಜಾವಾಣಿ ಚಿತ್ರ
ಕೆ‌.ಪ್ರಭಾಕರ್ ಅವರು ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ವಸ್ತು ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದರು. ಕುಲಸಚಿವ (ಪರೀಕ್ಷಾಂಗ) ಪ್ರೊ.ರಾಜು ಕೃಷ್ಣ ಚಲಣ್ಣವರ, ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ, ನ್ಯಾಕ್‌ ನಿರ್ದೇಶಕ ಪ್ರೊ.ಎಸ‌್.ಸಿ.ಶರ್ಮ, ಕುಲಸಚಿವ ಪ್ರೊ.ಕಿಶೋರ್‌ ಕುಮಾರ್‌ ಸಿ.ಕೆ. ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಂಡ್ಯದ ಪ್ರಭಾಕರ ಕುಪ್ಪಹಳ್ಳಿ ಅವರು ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ಬುಧವಾರ ಪಿಎಚ್‌.ಡಿ ಪ್ರಮಾಣಪತ್ರ ಸ್ವೀಕರಿಸಿದರು.

80 ವರ್ಷದ ಅವರು ‘ಇನ್‌ವೆಸ್ಟಿಗೇಷನ್‌ ಇಂಟು ಹೈ ಸ್ಟ್ರೆಂಗ್ತ್‌ ಮ್ಯಾಂಗನೀಸ್‌ ಬ್ರಾಂಜ್‌ ವಿತ್‌ ಸಿಲಿಕಾನ್‌ ಅಡಿಷನ್ಸ್’ ಕುರಿತು ಸಂಶೋಧನೆ ಕೈಗೊಂಡಿದ್ದಾರೆ. ಅವರು ಪ್ರಮಾಣಪತ್ರ ಸ್ವೀಕರಿಸುವಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನಲ್ಲಿರುವ ‘ಪ್ರೇಮಾನಂದ ಸಾಗರ ವಸ್ತು ವಿಜ್ಞಾನದ ಅತ್ಯಾಧುನಿಕ ಕೇಂದ್ರ’ದಲ್ಲಿ ಪ್ರಾಧ್ಯಾಪಕರಾಗಿರುವ ಪ್ರಭಾಕರ, ‘ಸಂಶೋಧನೆ ಕೈಗೊಳ್ಳುವುದಕ್ಕೆ ನಮ್ಮ ಕಾಲೇಜಿನ ಪ್ರಾಧ್ಯಾಪಕ ಡಾ.ಕೇಶವಮೂರ್ತಿ ಪ್ರೇರಣೆ’ ಎನ್ನುತ್ತಾರೆ.

ADVERTISEMENT

ಬೆಂಗಳೂರು ಐಐಎಸ್ಸಿಯ ಎಂಜಿನಿಯರಿಂಗ್ ಪದವೀಧರರಾದ ಪ್ರಭಾಕರ್‌, ಬಾಂಬೇ ಐಐಟಿಯಲ್ಲೂ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಂಡಿದ್ದರು.

‘ಅಮೆರಿಕದಲ್ಲಿ 15 ವರ್ಷ ವಿಜ್ಞಾನಿಯಾಗಿದ್ದೆ. ಪಿಎಚ್‌.ಡಿ ಅಧ್ಯಯನ ನಡೆಸುವ ಕನಸು ಆಗಿನಿಂದಲೂ ಇತ್ತು. ಅದೀಗ ಕೈಗೂಡಿದೆ. ಅಧ್ಯಯನಕ್ಕೆ ಡಾ.ಮಂಜುನಾಥ ಪಟ್ಟಾಭಿ ಮಾರ್ಗದರ್ಶಕರಾಗಿದ್ದರು. ಇನ್ನು ಅಧ್ಯಯನ ಮುಂದುವರಿಸುತ್ತೇನೆ. ಯುವ ಜನರೂ ಸಂಶೋಧನಾ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗವೈಕಲ್ಯ ಅಡ್ಡಿಯಾಗದು’

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ದಿನಕರ ಕೆಂಜೂರು ತಮ್ಮ ‘ನಾಲೆಜ್ ಮ್ಯಾನೇಜ್‌ಮೆಂಟ್‌ ಪಾಲಿಸೀಸ್‌ ಆ್ಯಂಡ್‌ ಪ್ರಾಕ್ಟೀಸಸ್‌: ಎ ಸ್ಟಡಿ ವಿತ್‌ ರೆಫೆರೆನ್ಸ್ ಟು ಕಂಪ್ಯೂಟರ್‌ ಸಾಫ್ಟ್‌ವೇರ್‌ ಆ್ಯಂಡ್‌ ಸರ್ವಿಸಸ್‌ ಕಂಪನೀಸ್‌ ಇನ್‌ ಕರ್ನಾಟಕ’ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌.ಡಿ ಪಡೆದರು. ಅವರ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಅವರೇ ದಿನಕರ್‌ ಅವರಿಗೆ ಮಾರ್ಗದರ್ಶಕರು.

ಕೊರಗ ಸಮುದಾಯದಲ್ಲಿ ಪಿಎಚ್‌.ಡಿ ಪದವಿ ಪಡೆದ ಮೂರನೇ ವ್ಯಕ್ತಿ ಇವರು. ‘ಕಠಿಣ ಪರಿಶ್ರಮ,ಸಮರ್ಪಣಾ ಭಾವ, ಪತ್ನಿಯೂ ಸೇರಿದಂತೆ ಕುಟುಂಬದ ಸದಸ್ಯರ ನೆರವು, ಸಮುದಾಯ ಪ್ರಮುಖರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ದಿನಕರ್‌.

ಬಡತನ ಮೀರಿ 3 ಚಿನ್ನದ ಪದಕ ಪ್ರದೀಪ್‌

ಆರ್ಥಿಕವಾಗಿ ಬಡಕುಟುಂಬದ ಪ್ರದೀಪ್‌ ಶೆಟ್ಟಿ ಅವರು ಎಂ.ಎಸ್ಸಿ ಕೈಗಾರಿಕಾ ರಾಸಾಯನಿಕ ವಿಜ್ಞಾನದಲ್ಲಿ ಮೂರು ಚಿನ್ನದಪದಕಗಳೊಂದಿಗೆ ಮೊದಲ ರ‍್ಯಾಂಕ್‌ ಪಡೆದರು. ಅವರು ಬಂಟ್ವಾಳ ತಾಲ್ಲೂಕಿನ ರಾಯಿಯ ಸುಂದರ ಶೆಟ್ಟಿ– ಸುಮಿತ್ರಾ ದಂಪತಿಯ ಪುತ್ರ.

‘ತಂದೆ ಹೋಟೆಲ್‌ ಕಾರ್ಮಿಕರು. ತಾಯಿ ಬೀಡಿ ಕಟ್ಟುತ್ತಾರೆ. ನಾನೂ ಅರೆಕಾಲಿಕ ಕೆಲಸ ಮಾಡಿಕೊಂಡಿ ಕಲಿಕೆ ಮುಂದುವರಿಸಿದ್ದೇನೆ. ಫೆಲೋಶಿಪ್ ಸಿಕ್ಕರೆ ಆರ್ಗಾನಿಕ್‌ ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಅಧ್ಯಯನ ಕೈಗೊಳ್ಳುವ ಆಸೆ ಇದೆ’ ಎಂದು ಪ್ರದೀಪ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ಅವರು ಪ್ರಸ್ತುತ ಬೆಂಗಳೂರಿನ ಫಾರ್ಮ ಕಂಪನಿಯಲ್ಲಿ ಉದ್ಯೋಗಿ.

‘ಸಾಧನೆಗೆ ವಯಸ್ಸಿನ ಹಂಗಿಲ್ಲ’

ಬೆಂಗಳೂರಿನ ಬಸವನಗುಡಿಯ ಸುನಿತಾ ರವಿ (49) ಯೋಗವಿಜ್ಞಾನದಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಮೊದಲ ರ‍್ಯಾಂಕ್‌ ಪಡೆದರು. ಅವರ ಮಗಳು ಕಾನೂನು ಪದವಿ ವಿದ್ಯಾರ್ಥಿ. ಪತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ.

‘ನನಗೆ ಮೊದಲಿನಿಂದಲೂ ಯೋಗದಲ್ಲಿ ಆಸಕ್ತಿ. ಕುಟುಂಬದವರ ನೆರವು ಸಿಕ್ಕಿದ್ದರಿಂದ ಈ ವಯಸ್ಸಿನಲ್ಲೂ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳಲು ಸಾಧ್ಯವಾಯಿತು. ಸಾಧನೆಗೆ ವಯಸ್ಸಿನ ಹಂಗಿಲ್ಲ’ ಎಂದು ಅವರು ತಿಳಿಸಿದರು. ಅವರು ಈ ಹಿಂದೆ ಯೋಗ ತರಬೇತುದಾರರಾಗಿದ್ದರು.

ಕೃಷಿಕ ಕುವರಿಗೆ ಐಎಎಸ್‌ ಕನಸು

ಆಕಾಂಕ್ಷಾ ಎಚ್‌. ಬಿ.ಕಾಂ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳೊಂದಿಗೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಹಿರೇಬಂಡಾಡಿಯ ನಿವಾಸಿಯಾಗಿರುವ ಅವರ ತಂದೆ ಕೃಷಿಕ. ತಾಯಿ ಗೃಹಿಣಿ. ಪ್ರಸ್ತುತ ಮಂಗಳೂರಿನಲ್ಲಿ ಸಿ.ಎ ಆರ್ಟಿಕಲ್‌ಶಿಪ್‌ ಮಾಡುತ್ತಿದ್ದಾರೆ. ಆದರೆ ಭಾರತೀಯ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗುವುದು ಅವರ ಕನಸು.

‘ಐಎಎಸ್‌ ಅಧಿಕಾರಿ ಆಗಬೇಕೆಂಬುದು ನನ್ನ ಕನಸು. ಜಿಲ್ಲಾಧಿಕಾರಿಯಾದರೆ, ಹೆಚ್ಚು ಸೃಜನಶೀಲವಾಗಿ ಕೆಲಸ ಮಾಡುವುದರ ಜೊತೆಗೆ ಜನರಿಗೆ ನೆರವಾಗಬಹುದು’ ಎಂದು ಆಕಾಂಕ್ಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಧತ್ವ ಮೆಟ್ಟಿನಿಂತು ಸಾಧನೆ

ಗಿರಿಧರ ಎಸ್‌. ಪೈ ಅಂಧತ್ವ ಲೆಕ್ಕಿಸದೇ ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ ಸ್ನಾತಕೋತ್ತರ ಪರೀಕ್ಷೆಯನ್ನು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

‘ಧ್ವನಿ ತಂತ್ರಾಂಶದ ನೆರವಿನಿಂದ ಓದುತ್ತಿದ್ದೆ. ತರಗತಿಯ ಪಾಠದ ಧ್ವನಿಮುದ್ರಣ ಮಾಡಿಕೊಂಡು ಕ್ಯಾಂಪಸ್‌ಗೆ ಪ್ರಯಾಣ ಮಾಡುವಾಗ ಆಲಿಸುತ್ತಿದ್ದೆ. ಪಠ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಪರೀಕ್ಷೆ ಬರೆಯಲು ಇದು ನೆರವಾಯಿತು’ ಎಂದು ಅವರು ತಿಳಿಸಿದರು.

‘ತಾಯಿಯ ಹಾಗೂ ವಿಶ್ವವಿದ್ಯಾಲಯದ ಅಧ್ಯಾಪಕರ ಸಹಾಯದಿಂದ ಈ ಸಾಧನೆ ಸಾಧ್ಯವಾಗಿದೆ. ಎನ್‌ಇಟಿ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಪ್ರಾಧ್ಯಾಪಕನಾಗುವ ಕನಸು ಇದೆ’ ಎಂದು ಮಣ್ಣಗುಡ್ಡೆಯ ಸತೀಶ್ ಪೈ– ಸವಿತಾ ಪೈ ದಂಪತಿಯ ಪುತ್ರರಾಗಿರುವ ಗಿರಿಧರ್‌ ತಿಳಿಸಿದರು.


ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಲತಾ ಜೋಗಿ ಅವರು ರಸಾಯನ ವಿಜ್ಞಾನದಲ್ಲಿ ಮೂರು ಚಿನ್ನದಪದಕಗಳೊಂದಿಗೆ ರ‍್ಯಾಂಕ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.