ADVERTISEMENT

ಬ್ರೆಜಿಲ್ ಯುವತಿಯ ತುಳುನಾಡ ಪ್ರಣಯ

ಮಂಗಳೂರಿನ ಯುವಕ, ಸಾಫ್ಟ್‌ವೇರ್ ಎಂಜಿನಿಯರ್‌ ಆದಿತ್ಯ ಅವರನ್ನು ವರಿಸಿದ ತಾಟಿಯಾನಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 6:07 IST
Last Updated 11 ಆಗಸ್ಟ್ 2024, 6:07 IST
ಸಂಪ್ರದಾಯಬದ್ಧ ಮದುವೆ ಸಮಾರಂಭ
ಸಂಪ್ರದಾಯಬದ್ಧ ಮದುವೆ ಸಮಾರಂಭ   

ಮಂಗಳೂರು: ಕೈತುಂಬ ಮೆಹಂದಿಯ ಚಂದ, ತಲೆಗೆ ಹೂಗಳ ಅಂದ. ಹಣೆಯಲ್ಲಿ ಹೊಳೆದ ಬಿಂದಿ. ಸೀರೆಯುಟ್ಟು ಅಪ್ಪಟ ಭಾರತ ನಾರಿಯಂತೆ ಹಸೆಮಣೆಯಲ್ಲಿ ಮಿಂಚಿದವರು ಬ್ರಿಜಿಲ್‌ನ ಯುವತಿ.

ತುಳುನಾಡಿನ ಯುವಕನನ್ನು ತನ್ನೂರಿನಲ್ಲಿ ಪ್ರೀತಿಸಿ ಆತನ ಸಂಪ್ರದಾಯದಂತೆ ಮದುವೆಯಾದವರು ಸಾವೊ ಪೌಲೊ ನಗರದ ತಾಟಿಯಾನಿ ಮತ್ತು ಮಂಗಳೂರಿನ ಕರಂಗಲ್ಪಾಡಿಯ ಆದಿತ್ಯ ಪೈ ಅವರ ಈ ಮದುವೆ ನಡೆದದ್ದು ಆಗಸ್ಟ್ 9ರಂದು ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ.

ರಮಾನಂದ ಪೈ ಮತ್ತು ಪ್ರೀತಂ ಪೈ ಅವರ ಪುತ್ರ ಆದಿತ್ಯ ಎಂಟು ವರ್ಷಗಳಿಂದ ಬ್ರೆಜಿಲ್‌ನಲ್ಲಿದ್ದಾರೆ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ಮತ್ತು ತಾಟಿಯಾನಿ ಮಧ್ಯೆ ಪ್ರೇಮ ಮೊಳೆತು ಐದು ವರ್ಷಗಳಾಗಿವೆ. ಈ ಜೋಡಿಯ ಮದುವೆಯನ್ನು ಭಾರತದಲ್ಲಿ, ಕರಾವಳಿಯ ಸಂಪ್ರದಾಯದಂತೆ ಮಾಡಲು ಒಪ್ಪಿಕೊಂಡ ತಾಟಿಯಾನಿ ಅವರ ಪೋಷಕರಾದ ಅಟಿಲಿಯೊ ತೊಮಾಜಿ ಮತ್ತು ಮರಿಯಾ ಲೂಸಿಯಾ ಇನ್ನಿಬ್ಬರು ಮಕ್ಕಳಾದ ತಾಯಿಸ್ ಮತ್ತು ತನಿಟಾ ಅವರೊಂದಿಗೆ ಎರಡು ವಾರಗಳ ಹಿಂದೆ ಮಂಗಳೂರಿಗೆ ಬಂದಿದ್ದಾರೆ. 

ADVERTISEMENT

ಭಾರತದ ಸಂಪ್ರದಾಯ, ಮದುವೆ ನಡೆಸುವ ಪದ್ಧತಿ, ಅದರ ಸಿದ್ಧತೆಗಳ ಕುರಿತು ಆಸಕ್ತಿ ಹೊಂದಿರುವ ತಾಟಿಯಾನಿ ಮದುವೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿ ‘ಭಾರತದ ಸಂಸ್ಕೃತಿ ನನಗೆ ತುಂಬ ಇಷ್ಟ. ಆಹಾರ, ವಿಶೇಷವಾಗಿ ಲಡ್ಡು ಮತ್ತು ಐಸ್‌ಕ್ರೀಮ್‌ಗೆ ಮನಸೋತಿದ್ದೇನೆ’ ಎಂದು ಹೇಳಿದರು.  

‘2019ರಲ್ಲಿ ನಮ್ಮ ನಡುವೆ ಪ್ರೇಮ ಆರಂಭವಾಗಿತ್ತು. ತಾಟಿಯಾನಿ ಬಗ್ಗೆ ಪೋಷಕರಿಗೆ ತಿಳಿಸಿದಾಗ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರು ಆಕೆಯನ್ನು ತುಂಬ ಪ್ರೀತಿಸುತ್ತಿದ್ದಾರೆ. ತಾಟಿಯಾನಿ ಅವರ ಮನೆಯವರಿಗೆ ಇಲ್ಲಿನ ಮದುವೆಗಳ ವಿಡಿಯೊ ತೋರಿಸಲಾಗಿತ್ತು’ ಎಂದು ಆದಿತ್ಯ ತಿಳಿಸಿದರು.

ಮದುವೆಯ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.