ADVERTISEMENT

ಭಾವುಕ ವಾತಾವರಣದಲ್ಲಿ ‘ನಮ್ಮಯೋಧ’ ಆರಂಭ

ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕ ಸಂಭ್ರಮ; ನಿವೃತ್ತ ಯೋಧರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:44 IST
Last Updated 26 ಜುಲೈ 2024, 14:44 IST
ಕಾರ್ಗಿಲ್ ವಿಜಯ ದಿವಸದ ಬೆಳ್ಳಿಹಬ್ಬದ ಅಂಗವಾಗಿ ನಿವೃತ್ತ ಯೋಧರು ಮತ್ತು ಮಡಿದ ಯೋಧರ ಕುಟುಂಬದವರನ್ನು ಗೌರವಿಸಲಾಯಿತು –ಪ್ರಜಾವಾಣಿ ಚಿತ್ರ 
ಕಾರ್ಗಿಲ್ ವಿಜಯ ದಿವಸದ ಬೆಳ್ಳಿಹಬ್ಬದ ಅಂಗವಾಗಿ ನಿವೃತ್ತ ಯೋಧರು ಮತ್ತು ಮಡಿದ ಯೋಧರ ಕುಟುಂಬದವರನ್ನು ಗೌರವಿಸಲಾಯಿತು –ಪ್ರಜಾವಾಣಿ ಚಿತ್ರ    

ಮಂಗಳೂರು: ಸೇವೆಯಲ್ಲಿದ್ದಾಗ ಮಡಿದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ‘ನಮ್ಮ ಯೋಧ’ ಯೋಜನೆಗೆ ಶುಕ್ರವಾರ ಭಾವುಕ ವಾತಾವರಣದಲ್ಲಿ ಚಾಲನೆ ನೀಡಲಾಯಿತು.

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷದ ಅಂಗವಾಗಿ ಪಾಲಿಕೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಮುರಳೀಧರ ಮತ್ತು ಲೆಫ್ಟಿನೆಂಟ್ ಹರೀಶ್ ಕುಮಾರ್ ಕುಟುಂಬಕ್ಕೆ ತಲಾ ₹ 5 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಮುರಳೀಧರ ಅವರ ಪತ್ನಿ ಉಷಾಕಿರಣ ಮತ್ತು ಹರೀಶ್ ಕುಮಾರ್ ಅವರ ಪತ್ನಿ ಗೀತಾ ಅವರು ಚೆಕ್ ಸ್ವೀಕರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ‘ವಾಯುಸೇನೆಯಲ್ಲಿದ್ದು ಅತ್ಯುತ್ತಮ ಸೇವೆ ಸಲ್ಲಿಸಿ ಮಡಿದ ಫ್ಲೈಟ್ ಲೆಫ್ಟಿನೆಂಟ್ ರೊನಾಲ್ಡ್ ಕೆವಿನ್ ಸೆರಾವೊ ಅವರ ಹೆಸರನ್ನು ರಸ್ತೆಯೊಂದಕ್ಕೆ ಇರಿಸಿ ಆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಕ್ಯಾಪ್ಟನ್ ಪ್ರಾಂಜಲ್ ಹೆಸರನ್ನು ವೃತ್ತಕ್ಕೆ ಇರಿಸಿ ಅಭಿವೃದ್ಧಿ ಮಾಡಲಾಗುವುದು. ಈ ಎರಡೂ ಯೋಜನೆಗೆ ತಲಾ ₹ 15 ಲಕ್ಷ ಮೀಸಲಿಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಎಲ್ಲರೂ ಸುಖವಾಗಿರಬೇಕು ಎಂದು ಬಯಸುವ ದೇಶ ಭಾರತ. ಆದರೆ ನಮ್ಮ ಮೇಲೆ ನಿರಂತರವಾಗಿ ಪರಕೀಯರ ದಾಳಿ ಆಗಿದೆ. ಕಾರ್ಗಿಲ್ ಯುದ್ಧ ಅಂಥ ಆಕ್ರಮಣದ ಒಂದು ಭಾಗವಾಗಿತ್ತು. ಮಹಾನಗರಪಾಲಿಕೆ ವ್ಯಾಪ್ತಿಯ ಯೋಧರೊಂದಿಗೆ ಮತ್ತು ಅವರ ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ’ ಎಂದು ಅವರು ಭರವಸೆ ತುಂಬಿದರು.

ಉಪಮೇಯರ್ ಸುನೀತ, ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್‌, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿರೋಧ ಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ ಇದ್ದರು. ವರುಣ್ ಚೌಟ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಬ್ರಿಗೇಡಿಯರ್ ಐ.ಎನ್‌.ರೈ, ಕರ್ನಲ್‌ ನಿಟ್ಟೆಗುತ್ತು ಶರತ್ ಭಂಡಾರಿ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಸರ್ಜಂಟ್ ಶ್ರೀಕಾಂತ್ ಶೆಟ್ಟಿ, ನಾಯಕ್ ಬಿ.ಪ್ರಸನ್ನ, ಮಹಾನಗರ ಪಾಲಿಕೆ ಆಯುಕ್ತ ಆನಂದ್‌, ಉಪ ಆಯುಕ್ತ ಗಿರೀಶ್ ನಂದನ್‌, ಉದ್ಯೋಗಿಗಳಾದ ದೊಡ್ಡನಂಜಯ್ಯ ಮತ್ತು ಕಾಶಿನಾಥ್ ಗಾಳ್ಕರ್ ಅವರನ್ನು ಗೌರವಿಸಲಾಯಿತು.

ಬ್ರಿಗೇಡಿಯರ್ ಐ.ಎನ್. ರೈ –ಪ್ರಜಾವಾಣಿ ಚಿತ್ರ 

Cut-off box - ಗೌರವಿಸದಿದ್ದರೂ ಆದೀತು; ಅವಮಾನಿಸಬೇಡಿ ಕಾರ್ಗಿಲ್ ಪ್ರದೇಶ ಮತ್ತು ಯುದ್ಧದ ಬಗ್ಗೆ ಮಾಹಿತಿ ನೀಡಿದ ಬ್ರಿಗೇಡಿಯರ್ ಐ.ಎನ್‌.ರೈ ಸೈನಿಕರ ಬಗ್ಗೆ ಭಾವುಕರಾಗಿ ಮಾತನಾಡಿ ನಮ್ಮನ್ನು ಗೌರಿವಿಸದಿದ್ದರೂ ಪರವಾಗಿಲ್ಲ. ಆದರೆ ಅವಮಾನ ಮಾಡಬೇಡಿ. ಸೈನಿಕರ ಭಾವನೆಗಳಿಗೆ ಬೆಲೆ ಕೊಡಿ. ಸರ್ಕಾರಿ ಕಚೇರಿಗಳಿಗೆ ಬಂದಾಗ ಕುಳಿತು ಮಾತನಾಡಿಸಿ ಸಾಧ್ಯವಾದರೆ ಅವರಿಗೆ ಸಂಬಂಧಿಸಿದ ಕೆಲಸ ಮಾಡಿಕೊಡಿ ಎಂದು ಕೋರಿದರು. ‘ಸಾವು ಮತ್ತು ಬದುಕು ಯಾರ ಕೈಯಲ್ಲೂ ಇಲ್ಲ.‌ ಸೇವೆಯಲ್ಲಿದ್ದಾಗ ನಾನು ನಾಲ್ಕು ಬಾರಿ ಸತ್ತು ಬದುಕಿದ್ದೇನೆ. ಯೋಧರು ದೇಶ ಕಾಯುವ ಬಗೆ ಕಾರ್ಯನಿರ್ವಹಿಸುವ ಪ್ರದೇಶ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ರಜೆ ಸಿಕ್ಕಿದರೆ ವಿದೇಶಗಳಿಗೆ ತಿರುಗಾಡಲು ಹೋಗುವವರು ಕಾರ್ಗಿಲ್‌ ಲೇಹ್‌ ಮತ್ತಿತರ     ಪ್ರದೇಶ ನೋಡಿಬನ್ನಿ. ಸಿಯಾಚಿನ್‌ನಲ್ಲಿ ಅಸಹನೀಯ ಚಳಿ‌ಯಲ್ಲಿ ಸೈನಿಕರು ದಿನಗಳೆಯುತ್ತಾರೆ. ಕಾರ್ಗಿಲ್‌ನ ಎತ್ತರದ ಪ್ರದೇಶದಲ್ಲಿ ಆಮ್ಲಜನಕ ಸಿಗುವುದಿಲ್ಲ. ಪರೀಕ್ಷೆ ಮಾಡಿ ಒಂದೊಂದು ತಂಡವನ್ನು ಕಳುಹಿಸಬೇಕಾಗುತ್ತದೆ. ಕಾರ್ಗಿಲ್ ಯುದ್ಧ ಸುಧೀರ್ಘ ಕಾಲ ನಡೆಯಲು ಇದು ಕೂಡ ಕಾರಣವಾಯಿತು’ ಎಂದು ಅವರು ಹೇಳಿದರು. ‘ಸಿಯಾಚಿನ್‌ನಲ್ಲಿ ಭಾರತ ನೆಲೆಯೂರಿದ್ದಕ್ಕೆ ಅಂದಿನ ಪಾಕ್‌ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಸೇಡು ತೀರಿಸಿಕೊಳ್ಳಲು ಕಾರ್ಗಿಲ್‌ನಲ್ಲಿ ತಮ್ಮ ಸೇನೆಯನ್ನು ನೆಲೆಯೂರಿಸಿದರು‌’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.