ADVERTISEMENT

ಬೀದಿಬದಿ ಅಂಗಡಿ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:06 IST
Last Updated 24 ಡಿಸೆಂಬರ್ 2021, 2:06 IST
ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಬಳಿ ಬೀದಿಬದಿಯಲ್ಲಿದ್ದ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿದರು   –ಪ್ರಜಾವಾಣಿ ಚಿತ್ರ
ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಬಳಿ ಬೀದಿಬದಿಯಲ್ಲಿದ್ದ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿದರು   –ಪ್ರಜಾವಾಣಿ ಚಿತ್ರ   

ಮಂಗಳೂರು: ಪಾದಚಾರಿ ಮಾರ್ಗ ಅತಿಕ್ರಮಿಸಿ ಬೀದಿಬದಿ ತಲೆಎತ್ತಿರುವ ಅನಧಿಕೃತ ಅಂಗಡಿ ತೆರವುಗೊಳಿಸಲು ಮಹಾನಗರ ಪಾಲಿಕೆಯಿಂದ ತಂಡ ರಚಿಸಲಾಗಿದೆ. ಈ ತಂಡವು ಗುರುವಾರ ನಗರದಲ್ಲಿ ತೆರವು ಕಾರ್ಯ ಆರಂಭಿಸಿದೆ.

ಮಹಾನಗರಪಾಲಿಕೆ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ, ಜಂಕ್ಷನ್, ಸಾರ್ವಜನಿಕ ಸ್ಥಳ, ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಮಾಡಿಕೊಂಡು ಹಲವಾರು ಅನಧಿಕೃತ ಗೂಡಂಗಡಿ, ತಿಂಡಿ ತಿನಿಸು ವ್ಯಾಪಾರ, ತರಕಾರಿ, ಹೂವಿನ ಮತ್ತು ಇನ್ನಿತರ ಅನಧಿಕೃತ ಬೀದಿಬದಿ ವ್ಯಾಪಾರಗಳನ್ನು ನಡೆಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳ ನಿರಾತಂಕ ಓಡಾಟಕ್ಕೆ ಅಡಚಣೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದ್ದವು.

ಬುಧವಾರ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಆಯುಕ್ತ ಅಕ್ಷಯ್ ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬೀದಿ ವ್ಯಾಪಾರಸ್ಥರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ಅನಧಿಕೃತ ಬೀದಿಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ತಲಾ 15 ಸಿಬ್ಬಂದಿ ಒಳಗೊಂಡ ಒಟ್ಟು ಐದು ತಂಡಗಳನ್ನು ರಚಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಗುರುವಾರ ಅಕ್ಷಯ್ ಶ್ರೀಧರ ಉಪಸ್ಥಿತಿಯಲ್ಲಿ ತೆರವು ಕಾರ್ಯ ಆರಂಭವಾಗಿದೆ. ಈ ಕಾರ್ಯಾಚರಣೆಯನ್ನು ಪ್ರತಿದಿನ ಮಧ್ಯಾಹ್ನ ಮತ್ತು ಸಾಯಂಕಾಲದ ವೇಳೆ ನಿರಂತರವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.