ADVERTISEMENT

ಮಂಗಳೂರು | ಮಾದಕ ಪದಾರ್ಥ ಮಾರಾಟ: 8 ಮಂದಿ ಬಂಧನ

4 ಪ್ರತ್ಯೇಕ ಪ್ರಕರಣ, 6 ಕೆ.ಜಿ 389 ಗಾಂಜಾ, 219 ಗ್ರಾಂ ಬಾಂಗ್‌ ವಶ ವಶ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:56 IST
Last Updated 10 ಆಗಸ್ಟ್ 2025, 5:56 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಮಂಗಳೂರು: 'ಮಾದಕ ದ್ರವ್ಯ ಮುಕ್ತ ಮಂಗಳೂರು’ ಅಭಿಯಾನದ ಅಂಗವಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ನಿಷೇಧಿತ ಮಾದಕ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದ ಬೇರೆ ಬೇರೆ ಪ್ರಕರಣಗಳಲ್ಲಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 6 ಕೆ.ಜಿ 389 ಗ್ರಾಂ ಗಾಂಜಾ ಹಾಗೂ 219 ಗ್ರಾಂ ಬಾಂಗ್‌ ವಶಪಡಿಸಿಕೊಂಡಿದ್ದಾರೆ.

ಕುದ್ರೋಳಿ ಕಂಡತ್ತಪಳ್ಳಿ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗುಪ್ತವಾಗಿ ಹಲವು ದಿನಗಳಿಂದ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಬ್ದುಲ್ ಸಮದ್ ಅಲಿಯಾಸ್‌ ಚಮ್ಮು ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆತನಿಂದ 1 ಕೆ.ಜಿ 40 ಗ್ರಾಂ  ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ದ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ADVERTISEMENT

ಮೂಲ್ಕಿ  ಠಾಣೆಯ ವ್ಯಾಪ್ತಿಯ ಕೊಳ್ನಾಡುವಿನ ಲಿಂಗಪಾಯ್ಯನಕಾಡು ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ  ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ, ಸ್ಥಳೀಯ ನಿವಾಸಿ ಧರ್ಮಲಿಂಗ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.   ಆರೋಪಿಯಿಂದ 1 ಕೆ.ಜಿ 90 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮುಲ್ಕಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರವೂರಿನಲ್ಲಿ ಹೊರ ರಾಜ್ಯದಿಂದ ಬಂದ ಕೆಲವರು ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ಬಿಹಾರದ ದೋಲತ್ ಕುಮಾರ್ ಶರ್ಮಾ ಹಾಗೂ ಮಹಮ್ಮದ್ ಖುಷಲಂ  ಬಂಧಿತ ಆರೋಪಿಗಳು. ಅವರಿಂದ 1 ಕೆ.ಜಿ 189 ಗ್ರಾಂ ಗಾಂಜಾ ಮತ್ತು 219 ಗ್ರಾಂ ಬಾಂಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಈ ಕುರಿತು ಬಜಪೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡೀಲ್ ಸಮೀಪ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಮತ್ತು ಮೋಹಿತ್ ಬಂಧಿತ ಆರೋಪಿಗಳು. ಅವರಿಂದ  800 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ   ಕಂಕನಾಡಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ವಿದ್ಯಾರ್ಥಿಗಳಿಗೆ ಹಲ ದಿನಗಳಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ನಗರ ಪೂರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  ಕೇರಳದ ಮಲಪ್ಪುರಂನ ಪ್ರಣವ್ ಕೆ.ವಿ. ಬಂಧಿತ ಆರೋಪಿ.  ಆರೋಪಿಯಿಂದ  1 ಕೆ.ಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿ ವಿರುದ್ಧ ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ  ನ್ಯಾಯಾಂಗ ಬಂಧನ ವಿಧಿಸಲಾಗಿದೆ.‌

ನಗರದಲ್ಲಿ ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ಮಾದಕ ಪದಾರ್ಥ ಮಾರಾಟ ಮಾಡುತ್ತಿರುವ ಹಾಗೂ ಆರೋಪಿಗಳು  ಮಾರಾಟದ ಸಲುವಾಗ ಗಾಂಜಾವನ್ನು ನಗರಕ್ಕೆ ತರುತ್ತಿರುವ ಇತರ ಮೂಲಗಳ ಬಗ್ಗೆಯೂ ಈ ಪ್ರಕರಣಗಳ ತನಿಖೆಯ ವೇಳೆ ಖಚಿತ ಮಾಹಿತಿ ಸಿಕ್ಕಿದೆ. ಬಂಧಿತ ಆರೋಪಿಗಳಿಂದ ಗಾಂಜಾವನ್ನು ಖರೀದಿಸಿದವರ ವಿವರಗಳೂ ಲಭಿಸಿವೆ. ಅವರ ಪತ್ತೆಗಾಗಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಕಾರ್ಯ ಪ್ರವೃತ್ತವಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ  ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.