ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ಬಾಳ ಗ್ರಾಮದ ಟ್ಯಾಂಕರ್‌ಗಳ ನಿಲುಗಡೆ ಯಾರ್ಡ್‌ನಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಪೆಟ್ರೊಲ್ ಕದಿಯುತ್ತಿದ್ದ ಆರೋಪಿಯನ್ನು ಸುರತ್ಕಲ್ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ರವಿ ಬಂಧಿತ ಆರೋಪಿ. ಮುಡಿಪುವಿನ ಇಸಾಕ್ ಡಿಸೊಜ ಪರಾರಿಯಾದ ಆರೋಪಿ. ಆರೋಪಿಗಳು ಕದ್ದ 450 ಲೀ ಪೆಟ್ರೋಲ್, ಕೃತ್ಯಕ್ಕೆ ಬಳಸಿದ್ದ ಟ್ಯಾಂಕರ್ ಹಾಗೂ ಆಮ್ನಿ ಕಾರು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆಹಾರ ನಿರೀಕ್ಷಕಿ ರೇಖಾ ಎಂಬುವರು ದೂರು ನೀಡಿದ್ದು ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಳಾ ಗ್ರಾಮದ ಸಾಯಬಾಬಾ ಯಾರ್ಡ್‌ನಲ್ಲಿ ಪುರಂದರ ಎಂಬುವರಿಗೆ ಸೇರಿದ ಜಾಗದಲ್ಲಿ ನಿಲ್ಲಿಸಿರುವ ಟ್ಯಾಂಕರ್ ಲಾರಿಗಳಿಂದ ಪೆಟ್ರೋಲ್ ಕಳವು ಮಾಡಲಾಗುತ್ತಿದೆ ಎಂದು ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ. ಅವರಿಗೆ ಮಾಹಿತಿ ಬಂದಿತ್ತು. ಅವರು ಈ ಬಗ್ಗೆ ಆಹಾರ ನಿರೀಕ್ಷಕಿ ರೇಖಾ ಅವರಿಗೆ ತಿಳಿಸಿದ್ದರು. ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು.
‘ಸಾಯಬಾಬಾ ಯಾರ್ಡ್‌ನಲ್ಲಿ ಆಮ್ನಿ ಕಾರು ನಿಲ್ಲಿಸಲಾಗಿತ್ತು. ಅದರಲ್ಲಿ ಭರ್ತಿ ಪೆಟ್ರೋಲ್ ತುಂಬಿದ ನೀಲಿ ಬಣ್ಣದ 1.5 ಲೀಟರ್‌ನ ಎರಡು ಕ್ಯಾನ್, ಪೂರ್ತಿ ಪೆಟ್ರೋಲ್ ತುಂಬಿದ್ದ 50 ಲೀಟರ್‌ನ ಕಡು ನೀಲಿ ಬಣ್ಣದ ಒಂದು ಹಾಗೂ ಕೆಂಪು ಬಣ್ಣದ ಎರಡು ಕ್ಯಾನ್‌ಗಳು, ಪೂರ್ತಿ ಪೆಟ್ರೋಲ್ ತುಂಬಿದ್ದ ಬಿಳಿ ಬಣ್ಣದ 50 ಲೀಟರ್‌ನ ಕ್ಯಾನ್, ಅರ್ಧದಷ್ಟು ಪೆಟ್ರೋಲ್ ತುಂಬಿದ್ದ ನೀಲಿ ಬಣ್ಣದ 35 ಲೀಟರ್‌ನ ಎರಡು ಕ್ಯಾನ್‌ಗಳು, ಪೂರ್ತಿ ಪೆಟ್ರೋಲ್ ತುಂಬಿದ್ದ ಬಿಳಿ ಬಣ್ಣದ 20 ಲೀಟರ್ ನಾಲ್ಕು ಕ್ಯಾನ್‌ಗಳು, ನೀಲಿ ಬಣ್ಣದ ಮತ್ತು ಬಿಳಿಬಣ್ಣದ 35 ಲೀಟರ್‌ನ ಎರಡು ಖಾಲಿ ಕ್ಯಾನ್‌ಗಳು ಆಮ್ನಿ ಕಾರಿನಲ್ಲಿ ಪತ್ತೆಯಾಗಿವೆ. ಕೃತ್ಯಕ್ಕೆ ಬಳಸಿದ್ದ ಮೂರು ಗೋಣಿ ಚೀಲಗಳು, ಮೂರು ಸೀಟ್ ಕವರ್‌ಗಳು, ನಾಲ್ಕು ಲಾರಿ ಟ್ಯೂಬ್‌ಗಳು, ಎರಡು ಪ್ಲಾಸ್ಟಿಕ್ ಚೀಲಗಳು, ಪೆಟ್ರೋಲ್ ತೆಗೆಯಲು ಬಳಸುವ ಪ್ಲಾಸ್ಟಿಕ್ ಪೈಪ್ ಹಾಗೂ ಪ್ಲಾಸ್ಟಿಕ್ ಜ್ಯೂಲಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳಿಂದ ವಶಪಡಿಸಿಕೊಂಡ 450 ಲೀಟರ್ ಪೆಟ್ರೋಲ್‌ನ ಅಂದಾಜು ಬೆಲೆ ₹32 ಸಾವಿರ, ಟ್ಯಾಂಕರ್ ಲಾರಿಯ ಅಂದಾಜು ಮೌಲ್ಯ ₹ 20 ಲಕ್ಷ ಹಾಗೂ ಆಮ್ನಿ ಕಾರಿನ ಅಂದಾಜು ಮೌಲ್ಯ ₹ 2 ಲಕ್ಷ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಟ್ಯಾಂಕರ್ ನಿಲ್ಲಿಸುವ ಯಾರ್ಡ್‌ನ ಮಾಲೀಕ ಕೂಡಾ ಈ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಎಂಬುದಾಗಿ ಆರೋಪಿ ತಿಳಿಸಿದ್ದಾನೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.