ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆ ಸುರಿದಿದ್ದು, ಬುಧವಾರ ಗಾಳಿ ಸಹಿತ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಸೊಣಂದೂರು ಗ್ರಾಮದ ವಡ್ಡ ಕೃಷ್ಣಯ್ಯ ಆಚಾರ್ ಮನೆ, ಪಟ್ರಮೆ ಗ್ರಾಮದ ಪಂಜುರ್ಲಿಕೋಡಿ ಬಳಿಯ ಮಾಯಿಲ ಮುಗೇರ ಅವರ ವಾಸದ ಮನೆ, ಶಿಶಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ಯಡ್ಕ ಬಳಿ ಜಗದೀಶ ಅವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕುತ್ಲೂರು ಗ್ರಾಮದ ಸುಲೋಚನ ಜೈನ್ ಅವರ ವಾಸದ ಮನೆ ಕುಸಿತವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಮಾಲಾಡಿ ಗ್ರಾಮದ ನಾವುಂಡ ರಸ್ತೆಗೆ ಮರ ಬಿದ್ದು ಬಳಿಕ ತೆರವುಗೊಳಿಸಲಾಯಿತು.
ಬುಧವಾರ ಸುರಿದ ಭಾರಿ ಮಳೆ ಹಾಗೂ ಕೆಲವೆಡೆ ವಿದ್ಯಾರ್ಥಿಗಳು ಮನೆ ತಲುಪುವಲ್ಲಿ ಉಂಟಾದ ಸಮಸ್ಯೆ ತಿಳಿದು ತಹಶೀಲ್ದಾರ್ ಪೃಥ್ವಿ ಸಾನಿಕಂ ಗುರುವಾರ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು. ರಜೆ ಘೋಷಣೆಯ ಪರಿಣಾಮವೋ ಎಂಬಂತೆ ಗುರುವಾರ ಮಳೆಯೂ ಬಿಡುವು ಕೊಟ್ಟು ಸುರಿದಿದ್ದು, ನದಿ ನೀರಿನ ಮಟ್ಟವೂ ಸಾಕಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.