ಮಂಗಳೂರು: ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ತಮ್ಮ ಭದ್ರತಾ ವ್ಯವಸ್ಥೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.
ಶನಿವಾರ ಇಲ್ಲಿ ನಡೆದ ಜಿಲ್ಲಾ ಬಿಕ್ಕಟ್ಟು ತಂಡದ ಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖ ತೈಲ, ಅನಿಲ ಘಟಕಗಳು, ಬಂದರು, ವಿಮಾನ ನಿಲ್ದಾಣಗಳಲ್ಲಿ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ನಡೆಸಬೇಕು. ಜಿಲ್ಲಾಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ಇದೆ ಎಂದರು.
ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಮಾತನಾಡಿ, ಹೆಚ್ಚುವರಿ ಚೆಕ್ ಪೋಸ್ಟ್ ತೆರೆಯಲಾಗಿದೆ. ನಗರ ಪ್ರವೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ರಾತ್ರಿ ನಾಕಾಬಂದಿ ನಡೆಸಲಾಗುತ್ತಿದೆ. ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು 24 ಗಂಟೆಗಳ ಕಾಲವೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಸ್‌ಪಿ ಯತೀಶ್ ಎನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉದ್ದಿಮೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.