ADVERTISEMENT

ಯುವ ನೃತ್ಯೋತ್ಸವದಲ್ಲಿ ಭರತನಾಟ್ಯ, ಒಡಿಸ್ಸಿಯ ಲಾಲಿತ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:31 IST
Last Updated 8 ಜೂನ್ 2025, 16:31 IST
ಯುವ ನೃತ್ಯೋತ್ಸವದಲ್ಲಿ ಕಿನ್ನಿಗೋಳಿಯ ಶ್ರೇಯಾ ಜಿ ಅವರು ಭರತನಾಟ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಯುವ ನೃತ್ಯೋತ್ಸವದಲ್ಲಿ ಕಿನ್ನಿಗೋಳಿಯ ಶ್ರೇಯಾ ಜಿ ಅವರು ಭರತನಾಟ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಭರತನಾಟ್ಯದ ಲಾಲಿತ್ಯ, ಒಡಿಸ್ಸಿ ನೃತ್ಯದ ಭಕ್ತಿ–ಭಾವ, ಸಮೂಹ ನೃತ್ಯದ ಸೊಬಗಿನೊಂದಿಗೆ ಯುವ ಕಲಾವಿದೆಯರು ನಾಟ್ಯಪ್ರಿಯರನ್ನು ರಂಜಿಸಿದರು.

ನಗರದ ನೃತ್ಯಾಂಗನ್ ಸಂಸ್ಥೆ ಡಾನ್ ಬಾಸ್ಕೊ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಯುವ ನೃತ್ಯೋತ್ಸವದಲ್ಲಿ ಉಡುಪಿಯ ಶ್ರೇಷ್ಠಾ ದೇವಾಡಿಗ, ಮೈಸೂರಿನ ಪೂಜಾ ಸುಗಮ್ ಮತ್ತು ಕಿನ್ನಿಗೋಳಿಯ ಶ್ರೇಯಾ ಜಿ ಅವರು ಭರತನಾಟ್ಯದ ಸೊಬಗುಣಿಸಿದರೆ ಬೆಂಗಳೂರಿನ ಪೃಥ್ವಿ ನಾಯಕ್ ಒಡಿಸ್ಸಿ ನೃತ್ಯದ ಮೂಲಕ ಹೊಸ ಅನುಭವ ನೀಡಿದರು. ನಗರದ ಭರತಾಂಜಲಿ ಸಂಸ್ಥೆ ಪ್ರಸ್ತುತಪಡಿಸಿದ ಸಮೂಹ ನೃತ್ಯವು ಕಾರ್ಯಕ್ರಮಕ್ಕೆ ಸೊಗಸು ತುಂಬಿತು.

ಗಂಭೀರ ನಾಟ ರಾಗದಲ್ಲಿ ಪೋಣಿಸಿದ ಮಲ್ಲಾರಿ ಮೂಲಕ ಶ್ರೇಷ್ಠಾ ಅವರು ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಲಾವಂಗಿ ರಾಗದಲ್ಲಿ ‘ಕರುಣದಿ ಕಾಯೋ ನಟರಾಜ’  ಎಂಬ ಶಿವಸ್ತುತಿಯಲ್ಲಿ ‘ಕಾಮನ ದಹಿಸಿದವನು, ಮಡದಿಯ ತನುವಿನೊಳಗಿರಿಸಿಕೊಂಡವನ’ನ್ನು ಕೊಂಡಾಡಿದ ಅವರು ತಮ್ಮ ಪ್ರಸ್ತುತಿಯನ್ನು ಹೆಚ್ಚು ಮೋಹಕವಾಗಿಸಿದರು. ಜಿಂಜೋಟಿ ರಾಗದಲ್ಲಿ ‘ವಿಷಮಕಾರನ್ ಕಣ್ಣನ್’ ಕೂಡ ಮುದ ನೀಡಿತು.

ADVERTISEMENT

ಪಂದನಲ್ಲೂರು ಶೈಲಿಯ ನೃತ್ಯಕ್ಕೆ ಹೆಸರಾಗಿರುವ ಪೂಜಾ ಸುಗಮ್ ಅವರು ರಾಗಮಾಲಿಕಾದಲ್ಲಿ ಪ್ರಸ್ತುತಪಡಿಸಿದ ಪದವರ್ಣ ಸುಮಾರು 20 ನಿಮಿಷ ಕಲಾರಸಿಕರನ್ನು ಮಂತ್ರಮುಗ್ದಗೊಳಿಸಿತು. ಅಲರಿಪು, ಪದಂ ಮತ್ತು ಕೃತಿಯ ನಂತರ ದೇವರನಾಮಕ್ಕೆ ಹೆಜ್ಜೆ ಹಾಕಿದ ಶ್ರೇಯಾ ಕಿನ್ನಿಗೋಳಿ ಅವರ ಬಳಿಕ ಒಡಿಸ್ಸಿ ನೃತ್ಯದಲ್ಲಿ ಪೃಥ್ಚಿ ನಾಯಕ್ ಅವರು ಮಂಗಲಾಚರಣ್‌ನ ಆಮೋದ ಉಣಬಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಭರತಾಂಜಲಿ ಸಂಸ್ಥೆಯ ವಿದುಷಿ ಪ್ರತಿಮಾ ಶ್ರೀಧರ್ ‘ನೃತ್ಯಾಂಗನ್‌’ನ ರಾಧಿಕಾ ಶೆಟ್ಟಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ. ವಿದೇಶದಲ್ಲೂ ಕಾರ್ಯಕ್ರಮ ಮತ್ತು ತರಗತಿಗಳನ್ನು ನಡೆಸುವುದರೊಂದಿಗೆ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ’ ಎಂದರು.

ಯುವ ನೃತ್ಯೋತ್ಸವದಲ್ಲಿ ಕಿನ್ನಿಗೋಳಿಯ ಶ್ರೇಯಾ ಜಿ ಅವರು ಭರತನಾಟ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಯುವ ನೃತ್ಯೋತ್ಸವದಲ್ಲಿ ಮೈಸೂರಿನ ಪೂಜಾ ಸುಗಮ್ ಭರತನಾಟ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಯುವ ನೃತ್ಯೋತ್ಸವದಲ್ಲಿ ಮೈಸೂರಿನ ಪೂಜಾ ಸುಗಮ್ ಭರತನಾಟ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.