ಮಂಗಳೂರು: ‘ಸಮುದಾಯದ ಒಳಗೇ ಸಂಘರ್ಷ, ಬಿಕ್ಕಟ್ಟು ಸೃಷ್ಟಿಯಾಗುವುದು ನೋವಿನ ವಿಚಾರ. ಯಾವುದೇ ಭಿನ್ನಾಭಿಪ್ರಾಯ, ಸಂಘರ್ಷ ಎದುರಾದರೆ ಒಗ್ಗಟ್ಟಾಗಿ ಎದುರಿಸಿ ಸಮುದಾಯ ಬೆಳೆಸಬೇಕು’ ಎಂದು ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಇಲ್ಲಿಮ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕುಲಾಲ ಪ್ರತಿಷ್ಠಾನ ಆಯೋಜಿಸಿದ್ದ ‘ಕುಲಾಲ ಪರ್ಬ’ ಉದ್ಘಾಟಿಸಿ ಅವರು ಮಾತನಾಡಿ ‘ಸಮುದಾಯದ ಉದಾತ್ತ ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ಸಾಧಕರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು’ ಎಂದರು.
ನಿವೃತ್ತ ಪ್ರಾಂಶುಪಾಲ ಎಂ.ಪಿ. ಬಂಗೇರ ಮಾತನಾಡಿ, ‘ಕುಲಾಲ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಸಾಧನೆ ಮಾಡುತ್ತಿದ್ದಾರೆ. ಕುಲಾಲ ಪ್ರತಿಷ್ಠಾನದಿಂದ ಅಶಕ್ತರಿಗೆ ಆರ್ಥಿಕ ನೆರವು, ಸಾಧಕರಿಗೆ ಸನ್ಮಾನ ಮಾಡುವ ಕಾರ್ಯ ಅಭಿನಂದನೀಯ’ ಎಂದರು.
ಕುಲಶೇಖರ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ಅಧ್ಯಕ್ಷ ವಕೀಲ ರಾಮ್‌ಪ್ರಸಾದ್ ಎಸ್. ಮಾತನಾಡಿ, ಕುಲಾಲ ಪರ್ಬವು ಸಮುದಾಯಕ್ಕೆ ರೂಪುರೇಷೆ ನೀಡುವ ಒಳ್ಳೆಯ ಕಾರ್ಯಕ್ರಮ ಎಂದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಮಾತನಾಡಿದರು.
ಉರ್ವ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಕನಡ, ಓಲ್ಡ್‌ಕೆಂಟ್ ರೋಡ್ ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾವರ, ಕುಲಾಲ ಕುಂಬಾರರ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಸುರತ್ಕಲ್ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್, ಬೆಳ್ಮಣ್ಣು ಕುಂಭನಿಧಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕುಶ ಆರ್. ಮೂಲ್ಯ, ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು, ಸುಂದರ ಕುಲಾಲ್ ಅದ್ಯಪಾಡಿ ಭಾಗವಹಿಸಿದ್ದರು. ಲಕ್ಷ್ಮಣ ಕುಲಾಲ್ ಸ್ವಾಗತಿಸಿದರು. ಸುಧಾ ಪಿ. ಕುಲಾಲ್ ವಂದಿಸಿದರು.
ಕುಲಾಲ ಸಮುದಾಯದ 25 ಸಾಧಕರಿಗೆ ‘ಕುಲಾಲ ಸಾಧಕ ಪ್ರಶಸ್ತಿ’ ಪ್ರದಾನ, 25 ಜನರಿಗೆ ಆರ್ಥಿಕ ಸಹಾಯ ನೀಡಲಾಯಿತು. ಸುನಿಲ್ ಸಾಲ್ಯಾನ್, ದೇವಕಿ ಸಾಲ್ಯಾನ್ ದಂಪತಿಗೆ ಗೌರವಾಭಿನಂದನೆ ಮಾಡಲಾಯಿತು. ಅಮಿತ ಕಲಾ ಮಂದಿರ, ನಟನಾ ನೃತ್ಯ ಅಕಾಡೆಮಿ, ಸವಿಜೀವನಂ ನೃತ್ಯಾಲಯ, ವಿದುಷಿ ಮಾನಸ ಕುಲಾಲ್, ಸಿಂಚನಾ ಎಸ್. ಕುಲಾಲ್, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಗಣೇಶ್ ಎರ್ಮಾಳ್ ಅವರಿಂದ ತುಳು ಚಿತ್ರಗೀತೆ ಗಾಯನ ನಡೆಯಿತು. ಕಲಾಕುಂಭ ಕುಳಾಯಿ ತಂಡದಿಂದ ‘ಮಣ್ಣ ಬಾಜನ’ ನಾಟಕ, ಸೀತಾರಾಮ್ ಕುಲಾಲ್ ಮತ್ತು ತಂಡದಿಂದ ತಾಲೀಮು ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.