ADVERTISEMENT

ಸುಳ್ಯ | ಘನತ್ಯಾಜ್ಯ ವಿಲೇವಾರಿ: ಜಮೀನು ಸಮಸ್ಯೆ ಬಗೆಹರಿಸಲು ಕ್ರಮ

ಸುಳ್ಯ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 14:07 IST
Last Updated 29 ಮಾರ್ಚ್ 2025, 14:07 IST
<div class="paragraphs"><p>ತ್ಯಾಜ್ಯ (ಪ್ರಾತಿನಿಧಿಕ ಚಿತ್ರ)</p></div>

ತ್ಯಾಜ್ಯ (ಪ್ರಾತಿನಿಧಿಕ ಚಿತ್ರ)

   

ಚಿತ್ರ: ಮೆಟಾ ಎಐ

ಸುಳ್ಯ: ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಭೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ADVERTISEMENT

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ದುಗಲಡ್ಕದಲ್ಲಿ ಗುರುತಿಸಿರುವ ಜಾಗಕ್ಕೆ ಅರಣ್ಯ ಇಲಾಖೆಯವರ ಆಕ್ಷೇಪದ ಬಗ್ಗೆ, ಕಳೆದ ಸಭೆಯಲ್ಲಿ ತೀರ್ಮಾನ ಕೈಗೊಂಡ ವಿಷಯದ ಬಗ್ಗೆ ಪ್ರಸ್ತಾಪ ನಡೆಯಿತು.

ಅರಣ್ಯ ಅಧಿಕಾರಿ ಮಂಜುನಾಥ್ ಉತ್ತರ ನೀಡಿದರು.

ಘನತ್ಯಾಜ್ಯ ವಿಲೇವಾರಿಗೆ ಜಮೀನು ನಿಗದಿಪಡಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಅರಣ್ಯಾಧಿಕಾರಿ, ಕಂದಾಯ ಇಲಾಖೆ, ಭೂದಾಖಲೆಗಳ ಇಲಾಖೆ, ಸುಳ್ಯ ಪಟ್ಟಣ ಪಂಚಾಯಿತಿ ಜಂಟಿ ಸ್ಥಳ ಪರಿಶೀಲಿಸಲಾಗಿದೆ. ಆ ಜಮೀನಿನ ಪಹಣಿಯಲ್ಲಿ ಸರ್ಕಾರಿ ಎಂದು ನಮೂದಾಗಿದ್ದು, ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಸೂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದರು.

ಆಡಳಿತಾಧಿಕಾರಿ ಜಯಲಕ್ಷಿ ಮಾತನಾಡಿ, ಅರಣ್ಯ ಇಲಾಖೆಯ ನೋಡಲ್ ಅಧಿಕಾರಿ ನಾನೇ ಆಗಿದ್ದರೂ ಇಲ್ಲಿನ ಸಮಸ್ಯೆ ಬೇರೆಯದೇ ಇದೆ. ಈ ಬಗ್ಗೆ ಪುತ್ತೂರು ಉಪವಿಭಾಗಾಧಿಕಾರಿ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ತಾಲ್ಲೂಕಿನ ಶಿಥಿಲ ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಸುಳ್ಯ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿಡಿಪಿಒಗೆ ಸೂಚಿಸಿದರು.

ತಾಲ್ಲೂಕಿನ ಅಂಗನವಾಡಿಗಳ ಪರಿಸ್ಥಿತಿಗಳ ಬಗ್ಗೆ ಮಾಹಿತಿ ನೀಡಿದ ಸಿಡಿಪಿಒ ಶೈಲಜಾ, ಸುಳ್ಯ ತಾಲ್ಲೂಕಿನಲ್ಲಿ 150 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 147 ಸ್ವಂತ ಕಟ್ಟಡ ಹೊಂದಿವೆ. ಗುತ್ತಿಗಾರು ಗ್ರಾಮದ ಮೊಗ್ರ, ಬೆಳ್ಳಾರೆ ಗ್ರಾಮದ ಪಾಟಾಜೆ ಅಂಗನವಾಡಿ ಕೇಂದ್ರದ ಚಾವಣಿ ಶಿಥಿಲಗೊಂಡಿದೆ. ಇಲ್ಲಿಗೆ ಹೊಸ ಕಟ್ಟಡ ಅವಶ್ಯಕತೆಯಿದೆ. ಮಳೆಗಾಲ ಆರಂಭದಲ್ಲಿ ಕೇಂದ್ರವನ್ನು ಸಮೀಪದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದರು.

ಆಡಳಿತಾಧಿಕಾರಿ ಜಯಲಕ್ಷಿ, ಅಂಗನವಾಡಿಗಳಿಗೆ ಹೊಸ ಕಟ್ಟಡಕ್ಕೆ ನರೇಗಾ ಯೋಜನೆಯಲ್ಲಿ ಅವಕಾಶ ಇದೆ. ಎರಡೂ ಅಂಗನವಾಡಿಗಳ ಪ್ರಸ್ತಾವನೆಯನ್ನು ಸಲ್ಲಿಸಿ, ನರೇಗಾ ಯೋಜನೆಯಲ್ಲಿ ಅನುದಾನ ಮಂಜೂರು ಮಾಡಲಾಗುವುದು ಎಂದರು.

ಸಭೆಗೆ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಾಗಬೇಕು. ಮಾಹಿತಿ ನೀಡದೆ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಇಒ ರಾಜಣ್ಣ ಅವರಿಗೆ ಆಡಳಿತಾಧಿಕಾರಿ ನಿರ್ದೇಶನ ನೀಡಿದರು.

ಎಂಜಿನಿಯರಿಂಗ್ ವಿಭಾಗದ ಅಧಿಕಾರಿ, ಎಂಜಿನಿಯರ್‌ಗಳ ಕೊರತೆಯಿಂದ ನರೇಗಾ ಯೋಜನೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಪ್ರತಿ ಭೇಟಿ ನೀಡಿ ಹಾಜರಾತಿ ಪಡೆಯಲು ಕಷ್ಟವಾಗುತ್ತಿದೆ. ಇದನ್ನು ಆಯಾ ಗ್ರಾಮದ ಪಿಡಿಒ ಅವರಲ್ಲಿ ಮಾಡಿಸಲು ಸೂಚಿಸಬಹುದೇ ಎಂದು ಕೇಳಿದರು. ಸರ್ಕಾರದ ಸುತ್ತೋಲೆ ಬದಲಾಯಿಸಲು ಆಗುವುದಿಲ್ಲ ಎಂದು ಆಡಳಿತಾಧಿಕಾರಿ ತಿಳಿಸಿದರು.

ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.