ADVERTISEMENT

ಸರಾಸರಿ ಬಳಕೆ ಆಧರಿಸಿ ಈ ತಿಂಗಳ ವಿದ್ಯುತ್‌ ಬಿಲ್‌

ಪಾವತಿ ಮುಂದೂಡಿಕೆ ನಿರ್ದೇಶನ ಇಲ್ಲ: ಮೆಸ್ಕಾಂ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 16:57 IST
Last Updated 4 ಏಪ್ರಿಲ್ 2020, 16:57 IST

ಮಂಗಳೂರು: ಸರಾಸರಿ ಬಳಕೆ ಆಧರಿಸಿ ಗ್ರಾಹಕರಿಗೆ ಈ ತಿಂಗಳ ವಿದ್ಯುತ್‌ ಬಿಲ್‌ ನೀಡಲಾಗುವುದು ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.

ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್‌ವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗಾಗಲಿ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.

ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್ ಅನ್ನೇ ನೀಡುವ ವ್ಯವಸ್ಥೆ ಮಾಡಲಾಗುವುದು. ಗ್ರಾಹಕರು ಸಹಾಯವಾಣಿ 1912ಕ್ಕೆ ಕರೆಮಾಡಿ ಅಕೌಂಟ್ ಐ.ಡಿ. ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ ಬಿಲ್ ವಿವರಗಳನ್ನು ಇ-ಮೇಲ್, ಎಸ್ಎಂಎಸ್, ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾಗುವುದು. ಗ್ರಾಹಕರು ಮೆಸ್ಕಾಂನ ವೆಬ್‌ಸೈಟ್‌ www.mesco.inನಲ್ಲಿ ನೋಂದಾಯಿಸಿಕೊಂಡು ವಿದ್ಯುತ್ ಬಿಲ್ ವಿವರಗಳನ್ನು ಪಡೆಯಬಹುದು. ಇಲ್ಲವೇ ಸಂಬಂಧಪಟ್ಟ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಬಿಲ್ ವಿವರವನ್ನು ಪಡೆಯಬಹುದು ಎಂದು ಹೇಳಿದೆ.

ADVERTISEMENT

ಮೇ 1ರಿಂದ ಮೊದಲಿನಂತೆಯೇ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗೂ ಬಿಲ್ ಸ್ವೀಕೃತಿ ಚಟುವಟಿಕೆ ಆರಂಭಿಸಲಾಗುವುದು. ವಾಸ್ತವಿಕ ಬಳಕೆಯಲ್ಲಿ ಹಾಗೂ ಸರಾಸರಿ ಬಳಕೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ತಿಂಗಳ ಬಿಲ್‌ನಲ್ಲಿ ಸರಿಪಡಿಸಲಾಗುವುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ತಿಳಿಸಿದ್ದಾರೆ.

ಆನ್‌ಲೈನ್‌ ಮೂಲಕ ಪಾವತಿಸಿ: ಗ್ರಾಹಕರು ಆನ್‌ಲೈನ್ ಅಥವಾ ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ವಿನಂತಿಸಲಾಗಿದೆ.

ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಮಣಿಪಾಲ, ಶಿವಮೊಗ್ಗ, ಸಾಗರ, ಶಿಕಾರಿಪುರ, ಭದ್ರಾವತಿ, ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ಗ್ರಾಹಕರು www.mescom.org.in ಜಾಲತಾಣದಲ್ಲಿ ಲಾಗ್‍ಇನ್ ಆಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್‌ ಪಾವತಿಸಬಹುದು. Quick payment ಆಯ್ಕೆಯನ್ನು ಮಾಡಿ ಗ್ರಾಹಕರು ನೋಂದಣಿ ಮಾಡಿಕೊಳ್ಳದೆಯೂ ಪಾವತಿಸಬಹುದು. ಇದರ ಜತೆಗೆ ಉಪವಿಭಾಗದ ನಗದು ಕೌಂಟರ್‌ಗಳು ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯನಿರ್ವಹಿಸಲಿವೆ.

ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ, ಅಂತಹ ಗ್ರಾಹಕರು ಸ್ಥಳೀಯ ಮೆಸ್ಕಾಂ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಬೇಕು. ಅಂತಹ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.