ADVERTISEMENT

ಶಾಸಕರಿಂದಲೇ ಜಿಲ್ಲೆಯ ಶಾಂತಿಭಂಗ: ಎಸ್‌ಡಿಪಿಐ

ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ಬೇಗ ರಚಿಸಿ: ರಿಯಾಝ್ ಫರಂಗಿಪೇಟೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2025, 15:36 IST
Last Updated 6 ಮೇ 2025, 15:36 IST
ರಿಯಾಝ್ ಫರಂಗಿಪೇಟೆ
ರಿಯಾಝ್ ಫರಂಗಿಪೇಟೆ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೇ ಜಿಲ್ಲೆಯಲ್ಲಿ ಶಾಂತಿಭಂಗವನ್ನು ಉಂಟುಮಾಡುವ  ಕೆಲಸ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸರ ಬೆಂಬಲಕ್ಕೆ ನಿಲ್ಲಬೇಕಾದ ಶಾಸಕರೇ, ಅವರ ದೂಷಣೆಯಲ್ಲಿ ತೊಡಗುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ರಚಿಸುವುದಾಗಿ ಗೃಹಸಚಿವ ಜಿ.ಪರಮೇಶ್ವರ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಬೇಗ ಇದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಕೋಮು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣರಾದ  ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಸಹಚರರ ವಿರುದ್ಧ ಜಾಮೀನುರಹಿತ ಮೊಕದ್ದಮೆಗಳು ದಾಖಲಾಗಿದ್ದರೂ, ಅವರನ್ನು ಪೊಲೀಸರು ಇನ್ನೂ ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಉಪಾಧ್ಯಕ್ಷ ಮೂನಿಷ್ ಅಲಿ, ಮಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ  ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಭಾಗವಹಿಸಿದ್ದರು.

ಶಾಸಕ ಪೂಂಜ ಬಂಧನಕ್ಕೆ ಆಗ್ರಹ

‘ಉಪ್ಪಿನಂಗಡಿ ಬಳಿಯ ತೆಕ್ಕಾರು ಗ್ರಾಮದ ದೇವಸ್ಥಾನವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅವಾಚ್ಯವಾಗಿ ಮಾತನಾಡಿರುವ ಶಾಸಕ ಹರೀಶ್ ಪೂಂಜ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ. ಆತನನ್ನು ತಕ್ಷಣ ಬಂಧಿಸಬೇಕು’ ಎಂದು ರಿಯಾಝ್ ಪರಂಗಿಪೇಟೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.