ADVERTISEMENT

ಅಣಕು ಸಂಸತ್; ವಿದ್ಯಾರ್ಥಿಗಳ ಹುರುಪು

ನೀತಿ ನಿರೂಪಣೆ ಅರಿಯಲು ವೇದಿಕೆಯಾದ ಯುವ ಸಂಸತ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 7:06 IST
Last Updated 12 ಜುಲೈ 2025, 7:06 IST
ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಭವನದಲ್ಲಿ ನಡೆದ ಅಣಕು ಸಂಸತ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು : ಪ್ರಜಾವಾಣಿ ಚಿತ್ರ
ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಭವನದಲ್ಲಿ ನಡೆದ ಅಣಕು ಸಂಸತ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು : ಪ್ರಜಾವಾಣಿ ಚಿತ್ರ   

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಹೊಣೆಗಾರಿಕೆ, ನಾಯಕತ್ವ ಗುಣಗಳು, ಪೌರತ್ವದ ಜವಾಬ್ದಾರಿ, ನೀತಿ ನಿರೂಪಣೆ ಬಗ್ಗೆ ಅರಿತುಕೊಳ್ಳಲು ಯುವ ಸಂಸತ್‌ ಅಧಿವೇಶನವು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿತು.

ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಶುಕ್ರವಾರ ಇಲ್ಲಿನ ಕೆಸಿಸಿಐ ಸಭಾಭವನದಲ್ಲಿ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡರು.

ಯುವ ಸಂಸತ್‌ನಲ್ಲಿ ಭಾಗವಹಿಸಿದ್ದ ಭಾರತ್ ಅಕಾಡೆಮಿ, ನಳಂದಾ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಗಳೂರಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳು ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಚನಾತ್ಮಕವಾಗಿ ಚರ್ಚೆ ನಡೆಸಿದರು. ವಿದ್ಯಾರ್ಥಿಗಳ ಆತ್ಮವಿಶ್ವಾಸ, ವಿಷಯದ ಬಗೆಗಿನ ಆಳವಾದ ಜ್ಞಾನ ನೋಡುಗರಲ್ಲಿ ಬೆರಗು ಮೂಡಿಸಿತು. 

ADVERTISEMENT

ಸಂಸದ ಕ್ಯಾ. ಬ್ರಿಜೇಶ್ ಚೌಟ ಯುವ ಸಂಸತ್ ಉದ್ಘಾಟಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಜನರು ರೂವಾರಿಗಳಾಗಬೇಕು. ಯುವಶಕ್ತಿ ಮನಸ್ಸು ಮಾಡಿದರೆ, ದೇಶದಲ್ಲಿ ಪರಿವರ್ತನೆ ತರಲು ಸಾಧ್ಯ’ ಎಂದರು.

ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್‌ನ ನಿಕಟಪೂರ್ವ ಅಧ್ಯಕ್ಷೆ ಆತ್ಮಿಕಾ ಅಮೀನ್ ಮಾತನಾಡಿ, ‘ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಹಸಿರು ಹೊದಿಕೆ ಹೆಚ್ಚಿಸಲು ಮಿಯಾವಾಕಿ ಅರಣ್ಯದಂತಹ ಪುಟ್ಟ ಪುಟ್ಟ ಅರಣ್ಯಗಳನ್ನು ನಗರದಲ್ಲಿ ಬೆಳೆಸುವ ಬಗ್ಗೆ ಯೋಚಿಸಬೇಕಾಗಿದೆ. ಸಾಮೂಹಿಕ ಅರಿವಿನಿಂದ ಪರಿಸರದ ಸುಸ್ಥಿರತೆ ಕಾಪಾಡಬಹುದು’ ಎಂದರು.

ಕೆಸಿಸಿಐ ಉಪಾಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್, ಸಂಘಟನೆಯ ಪ್ರಮುಖರಾದ ಆಶಿಶ್ ರೈ, ಶಿಲ್ಪಾ ಘೋರ್ಪಡೆ, ಆಶಿತ್ ಬಿ. ಹೆಗ್ಡೆ, ಶೋಹನ್ ಶೆಟ್ಟಿ, ಆಶ್ರಿಕಾ ಅಮೀನ್, ಅಜಿತ್ ಕುಮಾರ್, ಆದಿತ್ಯ ಪೈ, ಗೌರವ ಹೆಗ್ಡೆ ಉಪಸ್ಥಿತರಿದ್ದರು.

ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಅಧ್ಯಕ್ಷೆಸಲೋಮ್ ಲೋಬೊ ಪೆರೇರಾ ಸ್ವಾಗತಿಸಿದರು. ದುರ್ಗಾದಾಸ್ ಶೆಟ್ಟಿ ವಂದಿಸಿದರು. ದಿಶಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.