ADVERTISEMENT

ಮೂಡಬಿದಿರೆ: ಬಿಜೆಪಿ ಅಭ್ಯರ್ಥಿ ಕೋಟ್ಯಾನ್ ನಾಮಪತ್ರ ಸಲ್ಲಿಕೆ

ಮೂಡುಬಿದಿರೆ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 7:42 IST
Last Updated 19 ಏಪ್ರಿಲ್ 2023, 7:42 IST
ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದು ಬಳಿಕ ನಾಮಪತ್ರ ಸಲ್ಲಿಸಿದರು
ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದು ಬಳಿಕ ನಾಮಪತ್ರ ಸಲ್ಲಿಸಿದರು   

ಮೂಡುಬಿದಿರೆ: ಇಲ್ಲಿನ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಶಾಸಕ ಉಮಾನಾಥ ಕೋಟ್ಯಾನ್ ಮಂಗಳ ವಾರ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದು ಚುನಾವಣಾ ಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಪೇಟೆಯ ಹನುಮಂತ ದೇವಸ್ಥಾನ ಮತ್ತು ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೆರೆದ ವಾಹನದಲ್ಲಿ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೊರಟರು. ಹುಲಿವೇಷಗಳ ಕುಣಿತ, ಚೆಂಡೆ, ವಾದ್ಯಘೋಷಗಳೊಂದಿಗೆ ಸಾಗಿ ಬಂದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಜೈಕಾರದ ಘೋಷಣೆ ಕೂಗಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ., ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ತೆರೆದ ಜೀಪಿನಲ್ಲಿದ್ದರು. ಮೆರವಣಿಗೆಯಲ್ಲಿ ಸೇರಿದ ಕಾರ್ಯಕರ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿದ್ದರು.

ADVERTISEMENT

ಐ.ಟಿ ಪಾರ್ಕ್‌ ನಿರ್ಮಾಣ: ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಜತೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ‘ಐದು ವರ್ಷದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ₹ 2 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಮತ್ತೊಮ್ಮೆ ಜನತೆಯ ಆಶೀರ್ವಾದ ಪಡೆಯುತ್ತಿದ್ದೇನೆ. ಮೆರವಣಿಗೆಯಲ್ಲಿ ಸೇರಿದ ಭಾರಿ ಸಂಖ್ಯೆಯ ಕಾರ್ಯಕರ್ತರನ್ನು ನೋಡಿದಾಗ ಈ ಬಾರಿಯ ನನ್ನ ಗೆಲುವಿನ ಅಂತರ ಕಳೆದ ಚುನಾವಣೆಗಿಂತಲೂ ಹೆಚ್ಚಾಗಲಿದೆ. ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾದಲ್ಲಿ ಕ್ಷೇತ್ರದಲ್ಲಿ ಐಟಿ ಪಾರ್ಕ್‌ ನಿರ್ಮಿಸಿ ಉದ್ಯೋಗ ಸೃಷ್ಟಿಸಲಾಗುವುದು. ಒಳಚರಂಡಿ ಯೋಜನೆ ಮತ್ತು ಮಾರುಕಟ್ಟೆ ನಿರ್ಮಾಣವನ್ನು ಆದ್ಯತಾ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ನಳಿನ್ ಕುಮಾರ್ ಕಟೀಲ್‌ ಮಾತನಾಡಿ, ‘ಉಮಾನಾಥ ಕೋಟ್ಯಾನ್‌ ಅವರ ಐದು ವರ್ಷದ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆ ಆಗದಿರುವುದು ಶಾಸಕರಲ್ಲಿರುವ ಸಾಮರಸ್ಯದ ಗುಣಕ್ಕೆ ಸಾಕ್ಷಿಯಾಗಿದೆ. ಕಾರ್ಯಕರ್ತರ ಬೆಂಬಲ, ಉತ್ಸಾಹವನ್ನು ನೋಡಿದಾಗ ಕೋಟ್ಯಾನ್ ಅವರ ವಿಜಯೋತ್ಸವ ಆರಂಭದ ಮುನ್ಸೂಚನೆಯಾಗಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಏರಿ ನವಕರ್ನಾಟಕ ನಿರ್ಮಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.