ADVERTISEMENT

ಬೆಟ್ಗೇರಿ ರುದ್ರಭೂಮಿಗೆ ಮೂಲ ಸವಲತ್ತಿನ ಕೊರತೆ 

ಮಳೆಗಾಲದಲ್ಲಿ ಆಂ‌ಬುಲೆನ್ಸ್ ತೆರಳಲೂ ಸಮಸ್ಯೆ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 24 ಆಗಸ್ಟ್ 2025, 6:46 IST
Last Updated 24 ಆಗಸ್ಟ್ 2025, 6:46 IST
   

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು

ಮೂಡುಬಿದಿರೆಯ ಬೆಟ್ಗೇರಿ ಹಿಂದೂ ರುದ್ರಭೂಮಿಯು ಮೂಲಸವಲತ್ತಿನ ಕೊರತೆ ಎದುರಿಸುತ್ತಿದೆ

ಮೂಡುಬಿದಿರೆ: ಇಲ್ಲಿನ ಬೆಟ್ಗೇರಿಯಲ್ಲಿರುವ ಹಿಂದೂ ರುದ್ರಭೂಮಿ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದ್ದು, ಶವ ಸಂಸ್ಕಾರ ನಡೆಸಲು ತೊಂದರೆ ಆಗಿದೆ.

ADVERTISEMENT

ಇಲ್ಲಿನ ಕಾಲೇಜು ಹಿಂಬದಿಯಲ್ಲಿರುವ ರುದ್ರಭೂಮಿಗೆ ವಾಹನದಲ್ಲಿ ಹೋಗಲು ಸರಿಯಾದ ರಸ್ತೆ ಇಲ್ಲ. ಮಳೆಗಾಲದಲ್ಲಿ ಶವವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲೂ ಕಷ್ಟವಾಗುತ್ತಿದೆ. ರಸ್ತೆಯಲ್ಲಿ ಕೆಸರು ನೀರು ತುಂಬಿ ವಾಹನದ ಚಕ್ರ ಹೂತು ಹೋಗುವ ಆತಂಕದಿಂದ ಚಾಲಕರು ಮುಂದೆ ಸಾಗಲು ಹಿಂದೇಟು ಹಾಕುತ್ತಾರೆ.

ಇಲ್ಲಿನ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಗೆ ಡಾಂಬರೀಕರಣ ಆಗಬೇಕಿದೆ. ಕೈಕಾಲು ತೊಳೆಯಲು ನೀರಿನ ವ್ಯವಸ್ಥೆಯೂ ಇಲ್ಲ. ಇಲ್ಲಿಗೆ ಬರುವವರು ಬಾಟಲಿ ನೀರು ತರಬೇಕಾಗುತ್ತದೆ. ಮುಖ್ಯ ಚಾವಣಿ ದುರ್ಬಲವಾಗಿದ್ದು ಅಪಾಯದಲ್ಲಿದೆ. ವಿಶ್ರಾಂತಿಗೆಂದು ಇರುವ ಕಟ್ಟಡವೂ ಅಪಾಯದಲ್ಲಿದೆ. ಮಳೆಗಾಲದಲ್ಲಿ ಮಳೆಯಿಂದ ಆಸರೆ ಪಡೆಯಲು, ಬೇಸಿಗೆಯಲ್ಲಿ ನೆರಳಿನ ವ್ಯವಸ್ಥೆಯೂ ಇಲ್ಲಿ ಇಲ್ಲ. ರುದ್ರಭೂಮಿಯ ಭದ್ರತೆಗೆ ಇದ್ದ ಆವರಣಗೋಡೆ ಕುಸಿದು ಬಿದ್ದಿದ್ದು, ದುರಸ್ತಿಯಾಗಿಲ್ಲ.

ಕಸ ತಂದು ಇಲ್ಲಿ ಎಸೆಯಲಾಗುತ್ತಿದ್ದು, ಪುರಸಭೆಯು ರುದ್ರಭೂಯ ನಿರ್ವಹಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಇಲ್ಲಿಗೆ ಬಂದವರಿಗೆ ಇಲ್ಲಿನ ಸಮಸ್ಯೆ ಕಂಡು ಬೇಸರ ಆಗುತ್ತಿದ್ದು, ಈ ವಿಷಯ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದಿತ್ತು.

ಬೆಟ್ಗೇರಿ ಸಾರ್ವಜನಿಕ ರುದ್ರ ಭೂಮಿಗೆ ಹೋಗುವ ರಸ್ತೆಗೆ ಡಾಂಬರೀಕರಣ, ಆವರಣಗೋಡೆ ದುರಸ್ತಿ ಸೇರಿದಂತೆ ಹಲವು ಮೂಲಸೌಕರ್ಯಗಳ ಅವಶ್ಯಕತೆ ಇದ್ದು, ಕೆಲವು ತುರ್ತು ಅಗತ್ಯಗಳ ಅನುಷ್ಠಾನ ಶೀಘ್ರ ಆಗಬೇಕಾಗಿದೆ. ಈ ವಿಚಾರವನ್ನು ಕೆಲವು ತಿಂಗಳ ಹಿಂದೆಯೇ ಪುರಸಭೆಯ ಗಮನಕ್ಕೆ ತರಲಾಗಿದೆ ಎಂದು ಕೋಟೆ ಬಾಗಿಲು ವಾರ್ಡ್ ಸದಸ್ಯ ಪುರಂದರ ದೇವಾಡಿಗ ಹೇಳಿದರು.

ಪುರಸಭೆ ಎಂಜಿನಿಯರ್ ರುದ್ರಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರ ಇ-ಟೆಂಡರ್ ಕರೆದು ಅಗತ್ಯ ಕಾಮಗಾರಿಗಳನ್ನು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.